ಪ್ರಧಾನಿ ಮೋದಿಗೆ ಗಡ್ಡ ಬೋಳಿಸಿಕೊಳ್ಳಲು 100 ರೂ. ಕಳುಹಿಸಿದ ಚಹಾ ಮಾರಾಟಗಾರ

Update: 2021-06-09 10:01 GMT

ಹೊಸದಿಲ್ಲಿ: ಮಹಾರಾಷ್ಟ್ರದ ಬಾರಾಮತಿಯ ಚಹಾ ಮಾರಾಟಗಾರರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ 100 ರೂ.ಗಳ ಮನಿ ಆರ್ಡರ್ ಕಳುಹಿಸಿ ಕೊಟ್ಟು ತಮ್ಮ ಉದ್ದನೆಯ ಗಡ್ಡವನ್ನು ಬೋಳಿಸಿಕೊಳ್ಳಿ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು new indian express ಸೇರಿದಂತೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಕಳೆದ ಒಂದೂವರೆ ವರ್ಷಗಳಲ್ಲಿ, ಕೋವಿಡ್-ಪ್ರೇರಿತ ಲಾಕ್ಡೌನ್ ನಿಂದಾಗಿ ಅಸಂಘಟಿತ ವಲಯಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಇದರಿಂದ ಅಸಮಾಧಾನಗೊಂಡ ಇಂದಾಪುರ ರಸ್ತೆಯ ಖಾಸಗಿ ಆಸ್ಪತ್ರೆಯ ಎದುರಿನ ಸಣ್ಣ ಚಹಾ ಅಂಗಡಿಯೊಂದರ ಮಾಲಕ ಅನಿಲ್ ಮೋರೆ, “ಪ್ರಧಾನಿ ಮೋದಿ ತಮ್ಮ ಗಡ್ಡವನ್ನು ಬೆಳೆಸಿದ್ದಾರೆ. ಅವರು ಏನನ್ನಾದರೂ ಹೆಚ್ಚಿಸಲು ಬಯಸಿದ್ದರೆ ಈ ದೇಶದ ಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ದೇಶದ ಜನರಿಗೆ ವ್ಯಾಕ್ಸಿನೇಷನ್ ವೇಗಗೊಳಿಸಲು ಪ್ರಯತ್ನಿಸಬೇಕು ಹಾಗೂ ಅಸ್ತಿತ್ವದಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು. ಕೊನೆಯ ಎರಡು ಲಾಕ್ ಡೌನ್ ಗಳಿಂದ ಉಂಟಾಗಿರುವ  ದುಃಖಗಳನ್ನು ಜನರು ತೊಡೆದುಹಾಕಲಿದ್ದಾರೆ ಎಂದು ಪ್ರಧಾನಿ ಖಚಿತಪಡಿಸಿಕೊಳ್ಳಬೇಕು’’ ಎಂದರು.

“ನಮ್ಮ ಪ್ರಧಾನ ಮಂತ್ರಿಯ ಬಗ್ಗೆ ನನಗೆ ಅತ್ಯಂತ ಗೌರವ ಹಾಗೂ ಮೆಚ್ಚುಗೆ ಇದೆ. ನಾನು ಉಳಿತಾಯ ಮಾಡಿರುವ 100 ರೂ.ಗಳನ್ನು ಅವರಿಗೆ ರೂ.ಕಳುಹಿಸಿದ್ದೇನೆ. ಅದರಿಂದ ಅವರು ತನ್ನ ಗಡ್ಡವನ್ನು ಕ್ಷೌರ ಮಾಡಿಕೊಳ್ಳಲಿ. ಅವರು ಸರ್ವೋಚ್ಚ ನಾಯಕರು ಹಾಗೂ  ನಾನು  ಅವರನ್ನು ನೋಯಿಸುವ ಉದ್ದೇಶ ಹೊಂದಿಲ್ಲ. ಆದರೆ ಸಾಂಕ್ರಾಮಿಕ ರೋಗದಿಂದಾಗಿ ದಿನದಿಂದ ದಿನಕ್ಕೆ ಬಡವರ ಸಮಸ್ಯೆಗಳು ಬೆಳೆಯುತ್ತಿರುವುದರಿಂದ ಅವರ ಗಮನ ಸೆಳೆಯಲು ಈ ಮಾರ್ಗ ತುಳಿದಿದ್ದೇನೆ”ಎಂದು ಅವರು ಹೇಳಿದರು.

ಕೋವಿಡ್ ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ 5 ಲಕ್ಷ ರೂ. ಹಾಗೂ ಲಾಕ್ ಡೌನ್ ನಿಂದ ಹಾನಿಗೊಳಗಾದ ಕುಟುಂಬಗಳಿಗೆ 30,000 ರೂ. ಗಳ ಆರ್ಥಿಕ ನೆರವು ನೀಡುವಂತೆ ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ಮೋರೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News