ಇಂದೋರ್‌, ಭೋಪಾಲ್‌ನಿಂದ ವಿಮಾನಗಳನ್ನು ಅಪಹರಿಸಿ ಪಾಕ್ ಗೆ ಕರೆದೊಯ್ಯುವ ಬೆದರಿಕೆ: ವ್ಯಕ್ತಿಯ ಬಂಧನ

Update: 2021-06-09 10:56 GMT
ಸಾಂದರ್ಭಿಕ ಚಿತ್ರ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಹಾಗೂ  ಇಂದೋರ್ ವಿಮಾನ ನಿಲ್ದಾಣಗಳಿಂದ ವಿಮಾನಗಳನ್ನು ಅಪಹರಿಸಿ ಪಾಕಿಸ್ತಾನಕ್ಕೆ ಕರೆದೊಯ್ಯುವುದಾಗಿ ಬೆದರಿಕೆ ಹಾಕಿದ್ದ ಆರೋಪದಡಿ 34 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಭೋಪಾಲ್‌ನ ರಾಜಾ ಭೋಜ್ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ದೂರವಾಣಿ ಕರೆ ಬಂದಿದ್ದು, ಈ ಸಂದರ್ಭದಲ್ಲಿ ಕರೆ ಮಾಡಿದಾತ ಬೆದರಿಕೆ ಹಾಕಿದ್ದಾನೆ ಎಂದು ಭೋಪಾಲ್‌ನ ಗಾಂಧಿನಗರ ಪೊಲೀಸ್ ಠಾಣೆ ಉಸ್ತುವಾರಿ ಅರುಣ್ ಶರ್ಮಾ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

"ವಿಮಾನಗಳನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮಂಗಳವಾರ ತಡರಾತ್ರಿ ಭೋಪಾಲ್‌ನಿಂದ 100 ಕಿ.ಮೀ ದೂರದಲ್ಲಿರುವ ಶುಜಲ್‌ಪುರ ಪಟ್ಟಣದಿಂದ ಸೆರೆ ಹಿಡಿಯಲಾಯಿತು. ಈ ವಿಷಯದ ತನಿಖೆಯ ಭಾಗವಾಗಿ ಆತನನ್ನು ಸಮಗ್ರವಾಗಿ ಪ್ರಶ್ನಿಸಲಾಗುತ್ತಿದೆ" ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ

ಬೆದರಿಕೆ ಕರೆ ಹಿನ್ನೆಲೆಯಲ್ಲಿ ಭೋಪಾಲ್ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News