2021-22ನೇ ವರ್ಷಕ್ಕೆ ಭಾರತದ ಜಿಡಿಪಿ ಪ್ರಗತಿ ದರದ ಅಂದಾಜನ್ನು ಶೇ.8.3ಕ್ಕೆ ಇಳಿಸಿದ ವಿಶ್ವಬ್ಯಾಂಕ್

Update: 2021-06-09 14:41 GMT

ವಾಷಿಂಗ್ಟನ್,ಜೂ.9: ವಿಶ್ವಬ್ಯಾಂಕ್ 2021-22ನೇ ಸಾಲಿಗೆ ಭಾರತದ ಜಿಡಿಪಿ ಬೆಳವಣಿಗೆ ದರದ ತನ್ನ ಅಂದಾಜನ್ನು ಶೇ.8.3ಕ್ಕೆ ತಗ್ಗಿಸಿದೆ. ಬೆಳವಣಿಗೆ ದರ ಶೇ.10.1ರಷ್ಟಾಗಲಿದೆ ಎಂದು ಅದು ಎಪ್ರಿಲ್ ನಲ್ಲಿ ಅಂದಾಜಿಸಿತ್ತು. ಕೊರೋನ ವೈರಸ್ ನ ಎರಡನೇ ಅಲೆಯಿಂದಾಗಿ ಭಾರತದ ಆರ್ಥಿಕ ಚೇತರಿಕೆಗೆ ಹಿನ್ನಡೆಯುಂಟಾಗುತ್ತಿದೆ ಎಂದು ಅದು ಬೆಟ್ಟುಮಾಡಿದೆ. 2022-23ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7.5ರಷ್ಟು ಬೆಳವಣಿಗೆಯಾಗಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

ಭಾರತದಲ್ಲಿ ಮಾರಕ ಕೋವಿಡ್ ಎರಡನೇ ಅಲೆಯು 2020-21ನೇ ಹಣಕಾಸು ವರ್ಷದ ಉತ್ತರಾರ್ಧದಲ್ಲಿ ಕಂಡು ಬಂದಿದ್ದ ನಿರೀಕ್ಷೆಗಿಂತ ಹೆಚ್ಚಿನ,ವಿಶೇಷವಾಗಿ ಸೇವಾಕ್ಷೇತ್ರದಲ್ಲಿನ, ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ ಎಂದು ವಿಶ್ವಬ್ಯಾಂಕ್ ಮಂಗಳವಾರ ಬಿಡುಗಡೆಗೊಂಡ ತನ್ನ ಗ್ಲೋಬಲ್ ಇಕನಾಮಿಕ್ ಪ್ರಾಸ್ಪೆಕ್ಟ್ಸ್ ನ ಇತ್ತೀಚಿನ ಸಂಚಿಕೆಯಲ್ಲಿ ತಿಳಿಸಿದೆ.

ಈ ವರ್ಷದ ಎಪ್ರಿಲ್ ನಲ್ಲಿ ವಿಶ್ವಬ್ಯಾಂಕ್ 2021-22ನೇ ಸಾಲಿಗೆ ಭಾರತದ ಜಿಡಿಪಿಯು ಶೇ.10.1ರ ದರದಲ್ಲಿ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದ್ದು,ಇದು ಜನವರಿಯಲ್ಲಿ ಅದು ಅಂದಾಜಿಸಿದ್ದ ಶೇ.5.4ಕ್ಕಿಂತ ಹೆಚ್ಚಾಗಿತ್ತು. ಆದರೆ ಈಗ ಅದು ತನ್ನ ಅಂದಾಜುಗಳನ್ನು ಕಡಿತಗೊಳಿಸಿದೆ. 2023-24ರಲ್ಲಿ ಭಾರತದ ಜಿಡಿಪಿಯು ಶೇ.6.5ರಷ್ಟು ಬೆಳವಣಿಗೆಯಾಗುವ ಸಾಧ್ಯತೆಯಿದೆ ಎಂದು ಅದು ತಿಳಿಸಿದೆ.

ಎಪ್ರಿಲ್ನಿಂದ ಆರಂಭಗೊಂಡಿರುವ 2021-22ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯು ಶೇ.8.3ರ ದರದಲ್ಲಿ ಬೆಳವಣಿಗೆ ಯಾಗಲಿದೆ. 

ಮೂಲಸೌಕರ್ಯ,ಗ್ರಾಮೀಣಾಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ವೆಚ್ಚ,ಸೇವಾ ಮತ್ತು ತಯಾರಿಕೆ ಕ್ಷೇತ್ರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಚೇತರಿಕೆ ಇವು ಇದಕ್ಕೆ ಪೂರಕವಾಗಲಿವೆ. 2021-22ನೇ ಸಾಲಿಗೆ ಅಂದಾಜು ಕೋವಿಡ್ ಎರಡನೇ ಅಲೆ ಮತ್ತು 2021 ಮಾರ್ಚ್ನಿಂದ ಸ್ಥಳೀಯ ಲಾಕ್ಡೌನ್ನಿಂದಾಗಿ ನಿರೀಕ್ಷಿತ ಆರ್ಥಿಕ ನಷ್ಟವನ್ನು ಒಳಗೊಂಡಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News