ಅಕ್ರಮವಾಗಿ ಭಟ್ಕಳದಲ್ಲಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯ ಬಂಧನ: ಎಸ್ಪಿ ಶಿವಪ್ರಕಾಶ ದೇವರಾಜು

Update: 2021-06-10 13:45 GMT
ಆರೋಪಿ ಮಹಿಳೆ ವಾಸಿಸುತ್ತಿದ್ದ ನವಾಯತ್ ಕಾಲೋನಿಯ ಮನೆ

ಕಾರವಾರ: ಕಳೆದ ಐದು ವರ್ಷಗಳಿಂದ ಭಟ್ಕಳ ತಾಲೂಕಿನ ನವಾಯತ್ ಕಾಲನಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ಅವರು ಮಾಹಿತಿ ನೀಡಿದ್ದಾರೆ. 

ಜೂನ್ 8 ರಂದು ವಿದೇಶಿ ಮಹಿಳೆ ಖತೀಜಾ ಮೆಹರಿನ್ ಎಂಬವರು ಭಟ್ಕಳದಲ್ಲಿ ವಾಸವಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಜೂ. 9ರಂದು ಮನೆಗೆ ತೆರಳಿ ಖತೀಜಾ ಮೆಹರಿನ್ ರ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಆ ಮಹಿಳೆ ಪಾಕಿಸ್ತಾನದವರು ಎಂದು ತಿಳಿದು ಬಂದಿದೆ ಎಂದರು.

ಪಾಕಿಸ್ತಾನ ಪೌರತ್ವ ಹೊಂದಿದ್ದ ಖತೀಜಾ ಮೆಹರಿನ್ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಟ್ಕಳದಲ್ಲಿ ನೆಲೆಸಿದ್ದಾರೆಂದು ಆರೋಪಿಸಲಾಗಿದೆ.

ಈಕೆಯು ಸುಮಾರು 8 ವರ್ಷಗಳ ಹಿಂದೆ ಭಟ್ಕಳದ ನವಾಯತ್ ಕಾಲನಿಯ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿದ್ದಳು. 2014ರಲ್ಲಿ ಮೂರು ತಿಂಗಳ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದು ಹಿಂದಿರುಗಿದ್ದ ಈಕೆ, 2015ರಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದು ತನ್ನ ಪತಿಯ ಮನೆಯಾದ ಭಟ್ಕಳದ ನವಾಯತ್ ಕಾಲನಿಯಲ್ಲಿ ತನ್ನ 3 ಮಕ್ಕಳೊಂದಿಗೆ ವಾಸವಾಗಿದ್ದಳು ಎನ್ನಲಾಗಿದೆ. 

ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಭಟ್ಕಳ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಈ ವೇಳೆ ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ಪಡೆದುಕೊಂಡಿದ್ದ ರೇಶನ್ ಕಾರ್ಡ್, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ವಿದೇಶಿ ಕಾಯ್ದೆ ಉಲ್ಲಂಘನೆ ಸೇರಿದಂತೆ ಇತರ ಸೆಕ್ಷನ್‍ಗಳ ಅಡಿ ಈಕೆಯ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಡಿವೈಎಸ್‍ಪಿ ಬದರೀನಾಥ, ಭಟ್ಕಳ ವಿಭಾಗದ ಡಿಎಸ್‍ಪಿ ಬೆಳ್ಳಿಯಪ್ಪ ಕೆ.ಯು. ಹಾಗೂ ಭಟ್ಟಳ ಸಿಪಿಐ ದಿವಾಕರ ಪಿ. ಎಂ. ಅವರ ಮಾರ್ಗದರ್ಶನದಲ್ಲಿ ಭಟ್ಕಳ ನಗರ ಠಾಣೆಯ ಪಿಎಸ್‍ಐ ಕುಸುಮಾ ಬಿ, ಸಿಬ್ಬಂದಿಗಳಾದ ನಾರಾಯಣ ನಾಯ್ಕ, ಮುಗ್ದುಂ ಪತ್ತೆಖಾನ್, ಲೋಕಪ್ಪ ಪತ್ತಿ ಹಾಗೂ ದಾಂಡೇಲಿ ಗ್ರಾಮೀಣ ಠಾಣೆಯ ಮಹಿಳಾ ಸಿಬ್ಬಂದಿ ಹೀನಾ ಎಫ್. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

“ನಮ್ಮ ಕಕ್ಷಿದಾರರ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದೇವೆ. ನಮ್ಮಲ್ಲಿರುವ ಎಲ್ಲ ದಾಖಲೆಗಳನ್ನು ನಾವು ಸೆಷನ್ ಕೋರ್ಟ್ ನಲ್ಲಿ ಸಾಬೀತುಪಡಿಸುತ್ತೇವೆ" ಎಂದು ಮಹಿಳೆಯ ಪರ ವಕೀಲ ಫರ್ಹಾನ್ ಖಾಝಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News