ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಪಡೆಗಳ ದಾಳಿಗೆ 3 ಫೆಲೆಸ್ತೀನೀಯರು ಬಲಿ

Update: 2021-06-10 15:51 GMT

ಗಾಝಾ ನಗರ (ಫೆಲೆಸ್ತೀನ್), ಜೂ. 10: ಆಕ್ರಮಿತ ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ನಡೆಸಿದ ಮುಂಜಾನೆಯ ದಾಳಿಯಲ್ಲಿ ಇಸ್ರೇಲಿ ಪಡೆಗಳು ಫೆಲೆಸ್ತೀನಿಯನ್ ಪ್ರಾಧಿಕಾರದ ಇಬ್ಬರು ಸೇನಾ ಗುಪ್ತಚರ ಅಧಿಕಾರಿಗಳು ಸೇರಿದಂತೆ ಕನಿಷ್ಠ ಮೂವರು ಫೆಲೆಸ್ತೀನೀಯರನ್ನು ಗುಂಡಿಟ್ಟು ಕೊಂದಿವೆ ಎಂದು ಫೆಲೆಸ್ತೀನಿಯನ್ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಇಬ್ಬರು ಗುಪ್ತಚರ ಅಧಿಕಾರಿಗಳನ್ನು 23 ವರ್ಷದ ಆದಮ್ ಯಾಸಿರ್ ಅಲವಿ ಮತ್ತು 32 ವರ್ಷದ ತಾಯ್ಸೀರ್ ಇಸ್ಸಾ ಎಂಬುದಾಗಿ ಫೆಲೆಸ್ತೀನಿಯನ್ ಆರೋಗ್ಯ ಸಚಿವಾಲಯ ಗುರುತಿಸಿದೆ ಎಂದು ಫೆಲೆಸ್ತೀನ್ ನ ವಫಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೃತ ಮೂರನೇ ವ್ಯಕ್ತಿಯನ್ನು ಜಮೀಲ್ ಅಲ್-ಅಮುರಿ ಎಂಬುದಾಗಿ ಗುರುತಿಸಲಾಗಿದೆ. ಅವರು ಇಸ್ರೇಲ್ ನ ಜೈಲುಗಳಲ್ಲಿ ಬಂಧನದಲ್ಲಿದ್ದರು.

ಇಸ್ರೇಲ್ ನ ಮಫ್ತಿಯಲ್ಲಿದ್ದ ಭದ್ರತಾ ಸಿಬ್ಬಂದಿ ನಡೆಸಿದ ದಾಳಿಯಲ್ಲಿ 23 ವರ್ಷದ ಇನ್ನೋರ್ವ ಫೆಲೆಸ್ತೀನ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಇಸ್ರೇಲ್ ನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ವಫಾ ಸುದ್ದಿ ಸಂಸ್ಥೆ ಹೇಳಿದೆ.

ಇತ್ತೀಚಿನ ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ಯುದ್ಧವಿರಾಮ ಏರ್ಪಟ್ಟ ವಾರಗಳ ಬಳಿಕ ಈ ದಾಳಿ ಸಂಭವಿಸಿದೆ. 

ಆಕ್ರಮಿಕ ಗಾಝಾ ಪಟ್ಟಿಯ ಮೇಲೆ 11 ದಿನಗಳ ಕಾಲ ಇಸ್ರೇಲ್ ನಡೆಸಿದ ದಾಳಿಯಲ್ಲಿ 66 ಮಕ್ಕಳು ಸೇರಿದಂತೆ 250ಕ್ಕೂ ಅಧಿಕ ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಗಾಝಾಪಟ್ಟಿಯ ಆಡಳಿತ ನೋಡಿಕೊಳ್ಳುತ್ತಿರುವ ಹಮಾಸ್ ಇಸ್ರೇಲ್ ನತ್ತ ಹಾರಿಸಿದ ರಾಕೆಟ್ ಗಳಿಗೆ ಇಸ್ರೇಲ್ ನಲ್ಲಿ ಕನಿಷ್ಠ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News