ಜಗಳವಾಡಿದಾತನಿಗೆ ಪಾಠ ಕಲಿಸಬೇಕೆಂದು ತನ್ನ ಮೊಮ್ಮಗಳನ್ನೇ ಕೊಂದ ಮಹಿಳೆ

Update: 2021-06-10 16:38 GMT

ಜೈಪುರ, ಜೂ.10: ನೀರಿನ ವಿಷಯದಲ್ಲಿ ಉಂಟಾದ ಜಗಳದ ಹಿನ್ನೆಲೆಯಲ್ಲಿ, ಜಗಳವಾಡಿದ ವ್ಯಕ್ತಿಗೆ ಪಾಠ ಕಲಿಸಬೇಕೆಂದು ಮಹಿಳೆಯೊಬ್ಬಳು ತನ್ನ 3 ವರ್ಷದ ಮೊಮ್ಮಗಳನ್ನು ಕೊಂದು, ಆ ವ್ಯಕ್ತಿಯ ಮೇಲೆ ಆರೋಪ ಹೊರಿಸಲು ಪ್ರಯತ್ನಿಸಿದ ಘಟನೆ ರಾಜಸ್ತಾನದ ಬರಾನ್ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕನಕಾ ಬಾಯಿ(50 ವರ್ಷ) ಆರೋಪಿಯಾಗಿದ್ದು ಈಗ ಪೊಲೀಸರ ವಶದಲ್ಲಿದ್ದಾಳೆ.

ರಾಜಸ್ತಾನದ ಬೊರಿನಾ ಗ್ರಾಮದಲ್ಲಿ ಮೇ 30ರಂದು ನೀರಿನ ವಿಷಯದಲ್ಲಿ ಎರಡು ತಂಡಗಳೊಳಗೆ ನಡೆದ ವಾಗ್ಯುದ್ದ ಬಳಿಕ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ಹಲವರು ಗಾಯಗೊಂಡಿದ್ದರು. ಈ ಜಗಳದಲ್ಲಿ ಅಮರ್ಲಾಲ್ ಮೋಗ್ಯಾ ಎಂಬಾತನ 3 ವರ್ಷದ ಪುತ್ರಿ ಮೃತಪಟ್ಟಿದ್ದಳು. 

ಬಾಲಕಿಯನ್ನು ರಾಮೇಶ್ವರ್ ಮೋಗ್ಯಾ ಎಂಬಾತ ಕೊಂದಿರುವುದಾಗಿ ದೂರು ದಾಖಲಿಸಲಾಗಿತ್ತು. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಪುತ್ರಿಯೂ ಜಗಳದ ಸಂದರ್ಭ ಗಾಯಗೊಂಡಿದ್ದಾಳೆ ಎಂದು ರಾಮೇಶ್ವರ್ ಹೇಳಿದ್ದಾನೆ. ಅಲ್ಲದೆ ತನಗೆ ಪಾಠ ಕಲಿಸುವುದಾಗಿ ಕನಕಾ ಬಾಯಿ ಬೆದರಿಸಿದ್ದಳು ಎಂದಿದ್ದಾನೆ. ಬಳಿಕ ಕನಕಾ ಬಾಯಿಯನ್ನು ವಿಚಾರಣೆ ನಡೆಸಿದಾಗ, ಮೊಮ್ಮಗಳನ್ನು ಕೊಂದು ರಾಮೇಶ್ವರ್ ಮೇಲೆ ಆರೋಪ ಹೊರಿಸಿ ಆತನಿಗೆ ಜೈಲುಶಿಕ್ಷೆ ವಿಧಿಸಲು ತಾನು ಯೋಜನೆ ರೂಪಿಸಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News