ಲಸಿಕೆ ವ್ಯರ್ಥ: ಜಾರ್ಖಂಡ್ ಗೆ ಅಗ್ರಸ್ಥಾನ: ಕೇಂದ್ರ ಸರಕಾರದ ಮಾಹಿತಿ

Update: 2021-06-10 16:44 GMT

ಹೊಸದಿಲ್ಲಿ, ಜೂ.10: ಮೇ ತಿಂಗಳಿನಲ್ಲಿ ಕೊರೋನ ಸೋಂಕು ಲಸಿಕೆಯ ಡೋಸ್ ವ್ಯರ್ಥಗೊಂಡ ರಾಜ್ಯಗಳ ಪಟ್ಟಿಯಲ್ಲಿ ಜಾರ್ಖಂಡ್ (33.95%) ಅಗ್ರಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ಮತ್ತು ಕೇರಳ ಋಣಾತ್ಮಕ ದರ ದಾಖಲಿಸುವ ಮೂಲಕ ಆದರ್ಶಪ್ರಾಯ ಸಾಧನೆ ತೋರಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಪ್ರತೀ ಲಸಿಕೆಯ ಶೀಷೆಯಲ್ಲಿ ನಿರ್ಧಿಷ್ಟ ಪ್ರಮಾಣವನ್ನು ವ್ಯರ್ಥವಾಗುವ ಪ್ರಮಾಣ ಎಂದು ಗುರುತಿಸಲಾಗಿದೆ. ಈ ವ್ಯರ್ಥವಾಗುವ ಪ್ರಮಾಣವನ್ನೂ ಸದುಪಯೋಗಪಡಿಸಿಕೊಳ್ಳುವ ಮೂಲಕ ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಕ್ರಮವಾಗಿ - 6.37% ಮತ್ತು  - 5.48% ಲಸಿಕೆ ವ್ಯರ್ಥ ಪ್ರಮಾಣ ದಾಖಲಿಸಿವೆ ಎಂದು ಕೇಂದ್ರ ಸರಕಾರ ಶ್ಲಾಘಿಸಿದೆ. 

ಛತ್ತೀಸ್ಗಢದಲ್ಲಿ 15.79%, ಮಧ್ಯಪ್ರದೇಶದಲ್ಲಿ 7.35%, ಪಂಜಾಬ್, ದಿಲ್ಲಿ, ರಾಜಸ್ತಾನ, ಉತ್ತರಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ಅನುಕ್ರಮವಾಗಿ 7.08%, 3.95%, 3.78%, 3.63% ಮತ್ತು 3.59% ಡೋಸ್ ಲಸಿಕೆ ವ್ಯರ್ಥಗೊಳಿಸಿವೆ. ಮೇ ತಿಂಗಳಿನಲ್ಲಿ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 790.6 ಲಕ್ಷ ಲಸಿಕೆ ಪೂರೈಸಿದ್ದು ಇದರಲ್ಲಿ 658.6 ಲಕ್ಷ ಲಸಿಕೆ ಬಳಕೆಯಾಗಿದೆ. ಎಪ್ರಿಲ್ನಲ್ಲಿ 902.2 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಜೂನ್ 7ರವರೆಗೆ ದೇಶದ 45 ವರ್ಷ ಮೀರಿದ ಜನಸಂಖ್ಯೆಯ 38% ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ತ್ರಿಪುರಾ(92%) ಅಗ್ರಸ್ಥಾನದಲ್ಲಿದ್ದರೆ ರಾಜಸ್ತಾನ ಮತ್ತು ಛತ್ತೀಸ್ಗಢ ತಲಾ 65%, ಗುಜರಾತ್ 53%, ಕೇರಳ 51%, ದಿಲ್ಲಿ 49% ಸಾಧನೆ ತೋರಿದೆ. ತಮಿಳುನಾಡಿನಲ್ಲಿ ಕೇವಲ 19%, ಜಾರ್ಖಂಡ್ ಮತ್ತು ಉತ್ತರಪ್ರದೇಶದಲ್ಲಿ ತಲಾ 24%, ಬಿಹಾರದಲ್ಲಿ 25% ಸಾಧನೆ ದಾಖಲಾಗಿದೆ ಎಂದು ಸರಕಾರ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News