ಗದ್ದೆಗಿಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಸುಪ್ರೀಂಕೋರ್ಟ್ ನ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್

Update: 2021-06-11 05:00 GMT

ಪುತ್ತೂರು, ಜೂ.11: ಕೊರೋನ ಲಾಕ್ ಡೌನ್ ನಿಂದ ಮನೆಯಲ್ಲೇ ಉಳಿದುಕೊಂಡಿರುವ ಜನರ ಪೈಕಿ ಹಲವರು ಈ ಅವಧಿಯನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆಂದು ಅರಿಯದ ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಇದೇವೇಳೆ

ಲಾಕ್ ಡೌನ್ ಕಾರಣಕ್ಕಾಗಿ ದಿಲ್ಲಿಯಿಂದ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿನ ತನ್ನ ಮನೆಗೆ ಬಂದಿರುವ ನ್ಯಾಯಾಧೀಶ, ಸುಪ್ರೀಂಕೋರ್ಟ್ ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಒಬ್ಬರು ತನ್ನೂರಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗುವ ಮೂಲಕ ಗಮನಸೆಳೆಯುತ್ತಿದ್ದಾರೆ.

ಸುಪ್ರೀಂಕೋರ್ಟ್ ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಈ ಕೃಷಿ ಪ್ರೇಮಿ. ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ನಿವಾಸಿಯಾಗಿರುವ ಕೆ.ಎಂ.ನಟರಾಜ್, ಉನ್ನತ ಹುದ್ದೆಯಲ್ಲಿದ್ದರೂ ಸಾಮಾನ್ಯ ಕೃಷಿಕನಂತೆ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದು, ಕೃಷಿಯನ್ನು ತ್ಯಜಿಸಿ ನಗರ ಜೀವನಕ್ಕೆ ಒಗ್ಗಿಕೊಂಡ ಯುವಕರಿಗೆ ಇವರ ಈ ಕೃಷಿ ಪ್ರೇಮ ಮಾದರಿಯಾಗಿದೆ. 

 ಕೆ.ಎಂ.ನಟರಾಜ್ ಕೃಷಿ ಕುಟುಂಬದಿಂದ ಬಂದವರು. ಈ ಕೃಷಿ ಪ್ರೇಮ ನಟರಾಜ್ ಅವರನ್ನು ಇಂದಿಗೂ ಬಿಟ್ಟಿಲ್ಲ. ಮನೆಯಿಂದಲೇ ಕಚೇರಿ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ತನ್ನನ್ನು ಬೆಳೆಸಿದ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. 

ದಿಲ್ಲಿಯಲ್ಲಿ ಸುಪ್ರೀಂಕೋರ್ಟ್ ನ ಕಲಾಪಗಳಲ್ಲಿ ವರ್ಷಪೂರ್ತಿ ಬ್ಯುಸಿಯಾಗಿರುವ ನಟರಾಜ್ ಕೆಲವು ದಿನಗಳ ಮಟ್ಟಿಗೆ ಊರಿಗೆ ಆಗಮಿಸುತ್ತಿದ್ದರೂ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವಕಾಶ ಅವರಿಗೆ ಸಿಗುತ್ತಿರಲಿಲ್ಲ. ಆದರೆ ಈ ಬಾರಿ ಕೊರೋನ ಲಾಕ್ ಡೌನ್ ದೇಶದೆಲ್ಲೆಡೆ ಹೇರಿಕೆಯಾದ ಕಾರಣ, ನಟರಾಜ್ ದಿಲ್ಲಿಯಿಂದ ನೇರವಾಗಿ ಊರಿಗೆ ಬಂದಿದ್ದಾರೆ. ತನ್ನ ಬಿಡುವಿನ ವೇಳೆಯನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ನಟರಾಜನ್ ತಮ್ಮ ಗದ್ದೆಯನ್ನು ಟ್ಯಾಕ್ಟರ್ ಹಾಗೂ ಟಿಲ್ಲರ್ ಮೂಲಕ ಸಂಪೂರ್ಣ ಹದ ಮಾಡಿದ್ದಾರೆ. ಕೃಷಿ ಚಟುವಟಿಕೆಗೆ ಬಳಸುವ ಹಳೆಯ ಶರ್ಟ್, ಲುಂಗಿ ಹಾಕಿಕೊಂಡು ಟ್ರ್ಯಾಕ್ಟರ್ ಹಾಗೂ ಟಿಲ್ಲರ್ ಚಲಾಯಿಸುತ್ತಿರುವ ದೃಶ್ಯಗಳನ್ನು ಮನೆಮಂದಿ ಸೆರೆ ಹಿಡಿದಿದ್ದು, ಇವರ ಕೃಷಿ ಪ್ರೇಮ ಭಾರೀ ಪ್ರಶಂಸೆಗೂ ಪಾತ್ರವಾಗಿದೆ.

ಪ್ರಚಾರ ಹಾಗೂ ಮಾಧ್ಯಮದಿಂದ ಸದಾ ದೂರವೇ ಇರುವ ಕೆ.ಎಂ.ನಟರಾಜ್ ಈ ಕುರಿತು ಮಾಧ್ಯಮಗಳ ಮುಂದೆ ಬರಲೂ ಹಿಂಜರಿಯುತ್ತಾರೆ. ಕೃಷಿ ನನ್ನ ರಕ್ತದಿಂದಲೇ ಬಂದಿದ್ದು, ಮಣ್ಣಿನ ಖುಣ ನನ್ನ ಮೇಲೆಯೂ ಇರುವ ಕಾರಣಕ್ಕಾಗಿ ಸಿಕ್ಕಿದ ಅವಕಾಶವನ್ನು ಬಳಸಿಕೊಂಡಿದ್ದೇನೆ ಎನ್ನುವ ನಟರಾಜ್, ಯುವಕರೂ ಕೃಷಿಯ ಬಗ್ಗೆ ಆಸಕ್ತಿ ವಹಿಸಿ, ಕೃಷಿಯಲ್ಲಿ ತೊಡಗಿಕೊಳ್ಳುವ ಅನಿವಾರ್ಯತೆಯಿದೆ ಎಂದು ಅಭಿಪ್ರಾಯಿಸುತ್ತಾರೆ. 

ನಟರಾಜ್ ಅವರ ಕೃಷಿ ಮೇಲಿನ ಪ್ರೀತಿಗೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News