ಶ್ರೀಲಂಕಾದ 38 ಪ್ರಜೆಗಳು ಮಂಗಳೂರು ಪೊಲೀಸ್ ವಶಕ್ಕೆ

Update: 2021-06-11 10:33 GMT

ಮಂಗಳೂರು, ಜೂ.11: ಉದ್ಯೋಗ ಅರಸಿಕೊಂಡು ಕೆನಡಾಕ್ಕೆ ತೆರಳುವ ಯತ್ನದಲ್ಲಿ ತಮಿಳುನಾಡು ಮೂಲಕ ಮಂಗಳೂರಿಗೆ ಬಂದು ಅಕ್ರಮವಾಗಿ ಆಶ್ರಯ ಪಡೆದಿದ್ದ ಆರೋಪದಲ್ಲಿ 38 ಮಂದಿ ಶ್ರೀಲಂಕಾದ ಪ್ರಜೆಗಳನ್ನು ಹಾಗೂ ಅವರಿಗೆ ಮಂಗಳೂರಿನಲ್ಲಿ ಆಶ್ರಯ ನೀಡಿದ್ದ ಆರು ಮಂದಿ ಸ್ಥಳೀಯರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ವಶಕ್ಕೆ ಪಡೆದಿರುವ 38 ಮಂದಿಯನ್ನು ಕೋವಿಡ್ ತಪಾಸಣೆಗೊಳಪಡಿಸಿ ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ಮುಂದಿನ ತನಿಖೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಮಾನವ ಕಳ್ಳ ಸಾಗಾಟದ ಗಂಭೀರ ಪ್ರಕರಣ ಇದಾಗಿದ್ದು, ವಿದೇಶಿ ಪ್ರಜೆಗಳ ಅಕ್ರಮ ಪ್ರವೇಶ ಹಾಗೂ ವಾಸದ ಅಪರಾಧವೂ ಇದಾಗಿದೆ. ವಶಕ್ಕೆ ಪಡೆಯಲಾದವರು ಉತ್ತರ ಶ್ರೀಲಂಕಾ ಭಾಗದ ನಿವಾಸಿಗಳೆಂದು ಹೇಳಲಾಗಿದ್ದು, ಇವರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ವಿದೇಶಿ ಕಾಯ್ದೆ, ಐಪಿಸಿ ಸೆಕ್ಷನ್ 14ರ ವಿದೇಶಿಯರ ಕಾಯ್ದೆ 1964 ಸೆಕ್ಷನ್ 12 (1) (ಎ) ಪಾಸ್‌ಪೋರ್ಟ್ ಕಾಯ್ದೆ 1967ರಂತೆಯೂ ಪ್ರಕರಣ ದಾಖಲಾಗಿದೆ.

ಶ್ರೀಲಂಕಾದ ಏಜೆಂಟರ ಮೂಲಕ ಕೆನಡಾ ದೇಶದಲ್ಲಿ ಉದ್ಯೋಗದ ಭರವಸೆಯೊಂದಿಗೆ 6ರಿಂದ 10 ಲಕ್ಷ 5ರಿಂದ 10 ಲಕ್ಷ ಶ್ರೀಲಂಕಾ ಕರೆನ್ಸಿಯನ್ನು ನೀಡಿ ಈ ವ್ಯಕ್ತಿಗಳನ್ನು ಖಾಸಗಿ ಬೋಟ್ ಮೂಲಕ ಮಾರ್ಚ್ 17ರಂದು ಚೆನ್ನೈಯ ತೂತುಕುಡಿಗೆ ತರಲಾಗಿತ್ತು. ಆದರೆ ಅಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಗಿ ತಪಾಸಣೆ ಆರಂಭಗೊಂಡಾಗ ಬಂಧನದ ಭೀತಿಯಲ್ಲಿ ಅವರನ್ನು ಬೆಂಗಳೂರಿಗೆ ಬಸ್‌ನಲ್ಲಿ ಕಳುಹಿಸಿ ಅಲ್ಲಿಂದ ಮಂಗಳೂರಿಗೆ ಸಾಗಿಸಲಾಗಿತ್ತು. ಇವರು ಮಂಗಳೂರಿನಲ್ಲಿ ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ವಾಸವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತಮಿಳುನಾಡು ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಸತತ 78 ಗಂಟೆಗಳ ಕಾರ್ಯಾಚರಣೆಯ ಮೂಲಕ ಬಂದರು ಅಝೀಝುದ್ದೀನ್ ರಸ್ತೆಯಲ್ಲಿರುವ ಸೀ ಪೋರ್ಟ್ ಹಾಗೂ ಮಂಗಳೂರು ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಸಿಟಿ ಲಾಡ್ಜ್‌ನಿಂದ ಹಾಗೂ ಕಸಬಾ ಬೆಂಗರೆಯ ಮನೆಯೊಂದರಲ್ಲಿ ಕೂಲಿಯಾಳುಗಳೆಂದು ಹೇಳಿಕೊಂಡು ನೆಲೆಸಿದ್ದ 38 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ತಿಳಿಸಿದರು.

ತಮ್ಮ ಕೆಲವು ಸ್ನೇಹಿತರೂ ಈ ಹಿಂದೆಯೇ ಕೆನಡಾಕ್ಕೆ ಕೆಲಸಕ್ಕಾಗಿ ಹೋಗಿದ್ದಾಗಿ ಪ್ರಾಥಮಿಕ ವಿಚಾರಣೆಯ ವೇಳೆ ವಶಕ್ಕೆ ಪಡೆಯಲಾದ ಶ್ರೀಲಂಕಾ ಪ್ರಜೆಗಳಲ್ಲಿ ಕೆಲವರು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಇವರು ಉದ್ಯೋಗ ನಿಮಿತ್ತ ಕೆನಡಾಕ್ಕೆ ತೆರಳಲು ಬಯಸಿದವರು ಎಂದು ತಿಳಿದು ಬಂದಿದ್ದು, ಮುಂದಿನ ತನಿಖೆಯ ವೇಳೆ ಇವರಿಗೆ ಸಹಕರಿಸಿದವರು, ಮಂಗಳೂರು, ಬೆಂಗಳೂರಿನಲ್ಲೂ ಇಂತರ ಮಾನವ ಕಳ್ಳ ಸಾಗಾಟಕ್ಕೆ ಏಜೆಂಟರು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದು ಬರಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ಎಸಿಪಿ ರಂಜಿತ್ ಕುಮಾರ್ ಉಪಸ್ಥಿತರಿದ್ದರು.


ಸಂಶಯಾಸ್ಪದರು ಕಂಡುಬಂದಾಗ ಮಾಹಿತಿ ಒದಗಿಸಿ

ಮಂಗಳೂರು ನಗರ ಶೈಕ್ಷಣಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಹೊರ ರಾಜ್ಯ ಹಾಗೂ ಹೊರ ದೇಶದ ನಿವಾಸಿಗಳಿಗೆ ಆಶ್ರಯ ನೀಡಿದೆ. ಆದರೆ ಅಕ್ರಮವಾಗಿ ನೆಲೆಸುವುದು ಭದ್ರತೆಯ ದೃಷ್ಟಿಯಿಂದ ಅಪಾಯಕಾರಿಯಾಗಿದ್ದು, ಯಾವುದೇ ಹೊಟೇಲ್, ಲಾಡ್ಜ್ ಅಥವಾ ಮನೆಗಳಲ್ಲಿ ಸಂಶಯಾಸ್ಪದ ರೀತಿಯಲ್ಲಿ ನೆಲೆಸಿರುವುದು ಕಂಡು ಬಂದಾಗ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕು ಎಂದು ಕಮಿಷನರ್ ಎನ್. ಶಶಿಕುಮಾರ್ ಸಾರ್ವಜನಿಕರಿಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News