ಪೊಲೀಸ್ ಕ್ಯಾಂಟೀನ್‌ನಲ್ಲಿ ಸಜ್ಜೆ, ಜೋಳದ ರೊಟ್ಟಿ!

Update: 2021-06-11 10:38 GMT

ಮಂಗಳೂರು, ಜೂ.11: ಲಾಕ್‌ಡೌನ್ ಆರಂಭಗೊಂಡಾಗಿನಿಂದ ಸುಮಾರು 2 ತಿಂಗಳಿನಿಂದ ನಗರದ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸ್ ಕ್ಯಾಂಟೀನ್‌ನಲ್ಲಿ ಇಂದು ಸಜ್ಜೆ ಹಾಗೂ ಜೋಳದ ರೊಟ್ಟಿಯ ಪರಿಮಳ. ಪೊಲೀಸ್ ಸಿಬ್ಬಂದಿಯ ಮನೆಯ ಮಹಿಳೆಯರು ಸ್ಥಳದಲ್ಲೇ ಕೈಯಲ್ಲಿ ರೊಟ್ಟಿ ತಟ್ಟಿ ಬಿಸಿ ಬಿಸಿಯಾಗಿ ರೊಟ್ಟಿ ರೆಡಿ ಮಾಡಿದರು. ರೊಟ್ಟಿ ಜತೆ ಹೆಸರು ಕಾಳು ಪಲ್ಯ, ಬದನೆಕಾಯಿ ಗೊಜ್ಜು, ಚಟ್ನಿ, ಮೊಸರು, ಕ್ಯಾರೆಟ್, ಮುಳ್ಳುಸೌತೆ ಸಲಾಡ್ ಕೂಡಾ ಇಂದಿನ ವಿಶೇಷವಾಗಿತ್ತು.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಡುಗೆ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರು ರೊಟ್ಟಿ ತಯಾರಿಸುವುದನ್ನು ವೀಕ್ಷಿಸಿದರು. ಬಳಿಕ ಹಾಳೆ ತಟ್ಟೆಯಲ್ಲಿ ರೊಟ್ಟಿ ಹಾಕಿಸಿಕೊಂಡು ಅಧಿಕಾರಿ ಸಿಬ್ಬಂದಿ ಜತೆಯಲ್ಲೇ ರೊಟ್ಟಿಯೂಟ ಸವಿದರು. ಡಿಸಿಪಿ ಹರಿರಾಂ ಶಂಕರ್, ಎಸಿಪಿ ರಂಜಿತ್ ಕುಮಾರ್ ಕೂಡಾ ಜತೆಯಾದರು.

‘‘ಕೋವಿಡ್ ಹಿನ್ನೆಲೆಯಲ್ಲಿ  ಹೊರ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅನುಕೂಲವಾಗುವ ದೃಷ್ಟಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಪ್ರತಿನಿತ್ಯ ಸುಮಾರು 350 ಮಂದಿ ಈ ಊಟದ ಪ್ರಯೋಜನ ಪಡೆಯುತ್ತಿದ್ದಾರೆ. ರಾತ್ರಿ ಊಟದ ವ್ಯವಸ್ಥೆಯನ್ನು ಇಸ್ಕಾನ್ ಸಂಸ್ಥೆ ಮಾಡುತ್ತಿದ್ದು, ಇದರೊಂದಿಗೆ ಕಷಾಯ ಕಾಫಿ, ಮಜ್ಜಿಗೆಯನ್ನೂ ನೀಡಲಾಗುತ್ತಿದೆ’’ ಎಂದು ಎನ್. ಶಶಿಕುಮಾರ್ ತಿಳಿಸಿದರು.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿಯೂ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಊಟ ತಿಂಡಿಗಾಗಿ ಸಾಕಷ್ಟು ಪರದಾಟ ನಡೆಸಿದ್ದಾರೆ. ಆದರೆ ಈ ಬಾರಿ ಅಂತಹ ಯಾವುದೇ ತೊಂದರೆ ಆಗದಂತೆ ಪೊಲೀಸ್ ಆಯುಕ್ತರು ನೋಡಿಕೊಂಡಿದ್ದಾರೆ ಎಂದು ಹಿರಿಯ ಮಹಿಳಾ ಸಿಬ್ಬಂದಿಯೊಬ್ಬರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News