ಕೋವಿಡ್-19 ಹಾವಳಿ: ವೈದ್ಯಕೀಯ ವೆಚ್ಚಕ್ಕಾಗಿ ಸಾಲದ ಬಲೆಗೆ ಬೀಳುತ್ತಿರುವ ಬಡಭಾರತೀಯರು
ಹೊಸದಿಲ್ಲಿ,ಜೂ.11: ಭಾರತದಲ್ಲಿ ಸುಮಾರು ಮೂರನೆ ಎರಡರಷ್ಟು ಭಾರತೀಯರು ಯಾವುದೇ ಆರೋಗ್ಯ ವಿಮೆಯನ್ನು ಹೊಂದದಿರುವುದರಿಂದ ಕೋವಿಡ್19 ಚಿಕಿತ್ಸೆಗಾಗಿ ಅವರು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವಂತಹ ಪರಿಸ್ಥಿತಿಯುಂಟಾಗಿದ್ದು, ಸಾವಿರಾರು ಮಂದಿ ಸಾಲದ ಬಲೆಗೆ ಬಿದ್ದಿದ್ದಾರೆಂದು ಬ್ಲೂಮ್ ಬರ್ಗ್ ವಾಣಿಜ್ಯ ಸುದ್ದಿಸಂಸ್ಥೆ ವರದಿ ಮಾಡಿದೆ.
ಸರಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿರುವುದು ಹಾಗೂ ಕಳಪೆ ಮಟ್ಟದ ಸೌಲಭ್ಯಗಳ ಕಾರಣ ಅನೇಕ ಮಂದಿ ಉತ್ತಮ ಚಿಕಿತ್ಸೆ ಪಡೆಯುವ ನಿರೀಕ್ಷೆಯಲ್ಲಿ ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುತ್ತಿರುವುದರಿಂದ ಅವರು ತಮ್ಮ ಜೇಬಿನಿಂದಲೇ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತಿದ್ದಾರೆಂದು ಅದು ಹೇಳಿದೆ.
ಜಗತ್ತಿನಾದ್ಯಂತ ಕೊರೋನ ವೈರಸ್ ಬಡವರ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆಯಾದರೂ, ಆರೋಗ್ಯ ಪಾಲನೆಗಾಗಿ ಸರಕಾರ ಮಾಡುತ್ತಿರುವ ವೆಚ್ಚವು ತೀರಾ ಕಡಿಮೆಯಾಗಿರುವ ಭಾರತದಂತಹ ದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ ಎಂದು ವರದಿ ಹೇಳಿದೆ.
ಸಹಸ್ರಾರು ಭಾರತೀಯರು ಕೊರೋನ ಚಿಕಿತ್ಸೆಗಾಗಿ ಚಿನ್ನ, ಆಸ್ತಿ ಅಡವಿಟ್ಟು ಸಾಲ ಪಡೆಯುತ್ತಿದ್ದಾರೆ, ಉಳಿತಾಯ ಕಡಿಮೆಯಾಗಿ ಸಾಲದ ಮೊತ್ತ ಹೆಚ್ಚುತ್ತಲೇ ಹೋಗುತ್ತಿದೆ. ವಾಹನಗಳ ಮಾರಾಟ, ಕಂಪೆನಿಗಳ ಲಾಭ ಹಾಗೂ ಸರಕಾರಿ ಆದಾಯವು ಪಾತಾಳಕ್ಕೆ ಕುಸಿಯತೊಡಗಿದೆ.
ಜನರು ಜವಳಿ, ಉಡುಪುಗಳು, ಪಾದರಕ್ಷೆ ಹಾಗೂ ವೈಯಕ್ತಿಕ ಪಾಲನೆಯ ಸಾಮಾಗ್ರಿಗಳಿಗೆ ಜನರು ವ್ಯಯಿಸುವುದು ಕಡಿಮೆಯಾಗುತ್ತಿದ್ದು, ಔಷಧಿವಸ್ತುಗಳ ಖರೀದಿಗೆ ಹೆಚ್ಚು ವೆಚ್ಚ ಮಾಡತೊಡಗಿದ್ದಾರೆ. ಹಲವಾರು ಭಾರತೀಯರು ಕೊರೋನ ಚಿಕಿತ್ಸೆಗಾಗಿ ಕಾಳಸಂತೆಯಲ್ಲಿ ಮಾರಾಟವಾಗುವ ದುಬಾರಿ ಬೆಲೆಯ ಜೀವರಕ್ಷಕ ಔಷಧಿಗಳನ್ನು ಖರೀದಿಸಲು ಮೋಟಾರು ಸೈಕಲ್ಗಳು, ಚಿನ್ನ ಮಾತ್ರವಲ್ಲ ಜಾನುವಾರುಗಳನ್ನು ಕೂಡಾ ಮಾರತೊಡಗಿದ್ದಾರೆ ಎಂದು ಬ್ಲೂಮ್ ಬರ್ಗ್ ತಿಳಿಸಿದೆ.
ರೆಮ್ಡೆಸಿವಿರ್ನಂತಹ ಔಷಧಿಳು ಅಲ್ಲದೆ ಖಾಸಗಿ ಆ್ಯಂಬುಲೆನ್ಸ್ಗಳು, ಖಾಸಗಿ ಆಸ್ಪತ್ರೆಯ ಹಾಸಿಗೆಗಳು ಮತ್ತು ಆಕ್ಸಿಜನ್ ಸಿಲಿಂಡರ್ಗಳಿಗಾಗಿ ವೆಚ್ಚವು ಕೋವಿಡ್19 ಸೋಂಕಿತರು ಮತ್ತವರ ಕುಟುಂಬಗಳ ಆರ್ಥಿಕತೆಯನ್ನು ದುಸ್ಥಿತಿಗೆ ತಳ್ಳಿವೆ ಎಂದು ವರದಿ ತಿಳಿಸಿದೆ.
ಕೊರೋನ ಸೋಂಕಿನ ಹಾವಳಿಯ ಸಂದರ್ಭ ಶೇ.90ಕ್ಕೂ ಅಧಿಕ ಮಂದಿ ಭಾರತೀಯರು ಸರಾಸರಿ 15 ಸಾವಿರ ರೂ. ಸಾಲವನ್ನು ಪಡೆದಿದ್ದಾರೆಂದು ಅದು ಹೇಳಿದೆ. ಜಾರ್ಖಂಡ್ ರಾಜ್ಯದಲ್ಲಿ ಕೊರೋನ ಹಾವಳಿ ಬಳಿಕ ಶೇ.58ರಷ್ಟು ಮಂದಿ ಸಾಲ ಮಾಡಿದ್ದಾರೆ ಹಾಗೂ ಶೇ.11ರಷ್ಟು ಮಂದಿ ತಮ್ಮ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿದ್ದಾರೆಂದು ನಡ್ಜ್ ಪ್ರತಿಷ್ಠಾನದ ಗ್ರಾಮೀಣ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಜಾನ್ಪಾಲ್ ತಿಳಿಸಿದ್ದಾರೆ. ಉಳಿತಾಯ ಅಥವಾ ವಿಮಾಸೌಲಭ್ಯದಿಂದ ವಂಚಿತವಾಗಿರುವ ಈ ಕುಟುಂಬಗಳಿಗೆ ಆಹಾರದಂತಹ ಪ್ರಮುಖ ಜೀವನಾವಶ್ಯಕತೆಗಳನ್ನು ಪಡೆಯುವುದಕ್ಕೆ ಹಣವನ್ನು ಹೊಂದಿಸುವುದೇ ಕಷ್ಟವಾಗಿದೆ ಎಂದವರು ಹೇಳಿದ್ದಾರೆ.