ಉಯಿಘರ್ ಮುಸ್ಲಿಮರ ದಿಗ್ಬಂಧನಾ ಶಿಬಿರಗಳನ್ನು ಬಯಲಿಗೆಳೆದ ಭಾರತೀಯ ಮೂಲದ ಪತ್ರಕರ್ತೆ ಮೇಘಾಗೆ ಪುಲಿಟ್ಝರ್ ಪ್ರಶಸ್ತಿ

Update: 2021-06-12 05:43 GMT
ಮೇಘಾ ರಾಜಗೋಪಾಲನ್ (Photo: Twitter/@ians_india)

ನ್ಯೂಯಾರ್ಕ್: ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಅವರು ಅಮೆರಿಕಾದ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿಯಾದ ಪುಲಿಟ್ಝರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಉಪಗ್ರಹ ತಂತ್ರಜ್ಞಾನವನ್ನು ಬಳಸಿ ಉಯಿಘರ್ ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಚೀನಾದಲ್ಲಿರುವ ಸಾಮೂಹಿಕ ದಿಗ್ಬಂಧನ ಶಿಬಿರಗಳನ್ನು ಬಯಲಿಗೆಳೆದ ಅವರ ತನಿಖಾ ವರದಿಗಳಿಗೆ ಈ ಪ್ರಶಸ್ತಿ ಒಲಿದಿದೆ.

ಅಂತರಾಷ್ಟ್ರೀಯ ವರದಿಗಾರಿಕೆ ವಿಭಾಗದಲ್ಲಿ ಮೇಘಾ ಅವರಿಗೆ ಈ ಪ್ರಶಸ್ತಿ ಬಂದಿದ್ದು, ಅವರ ಜತೆಗೆ ಅಂತರ್ಜಾಲ ಸುದ್ದಿ ತಾಣ 'ಬಝ್‍ಫೀಡ್ ನ್ಯೂಸ್‍'ನ ಅವರ ಇಬ್ಬರು ಸಹೋದ್ಯೋಗಿಗಳೊಂದಿಗೆ ಆಕೆ ಈ ಪ್ರಶಸ್ತಿ ಹಂಚಿಕೊಳ್ಳಲಿದ್ದಾರೆ ಎಂದು ಪುಲಿಟ್ಝರ್ ಮಂಡಳಿ ಶುಕ್ರವಾರ ತಿಳಿಸಿದೆ.

ಭಾರತೀಯ ಮೂಲದ ಇನ್ನೋರ್ವ ಪತ್ರಕರ್ತ ನೀಲ್ ಬೇಡಿ ಅವರು ಸ್ಥಳೀಯ ವರದಿಗಾರಿಕೆ ವಿಭಾಗದಲ್ಲಿ ತಮ್ಮ ತನಿಖಾ ವರದಿಗಳಿಗೆ ಪುಲಿಟ್ಝರ್ ಪ್ರಶಸಿ ಪಡೆದಿದ್ದಾರೆ. ಮಕ್ಕಳ ಮೇಲೆ ಕಣ್ಣಿಡಲು ಕಾನೂನು ಜಾರಿ  ಅಧಿಕಾರಿಯೊಬ್ಬರು ಅಧಿಕಾರ ದುರ್ಬಳಕೆ ಮಾಡಿದ ವಿಚಾರವನ್ನು ಅವರು 'ತಂಪಾ ಬೇ ಟೈಮ್ಸ್' ನ ಸಂಪಾದಕರೊಬ್ಬರ ಸೇರಿ ಬಯಲುಗೊಳಿಸಿದ್ದರು.

ಕೊಲಂಬಿಯಾ ವಿಶ್ವವಿದ್ಯಾಲಯದ ಗ್ರಾಜುವೇಟ್ ಸ್ಕೂಲ್ ಆಫ್ ಜರ್ನಲಿಸಂನ ಮಂಡಳಿ ಈ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿಯ ಪ್ರಶಸ್ತಿ 105ನೇ ಪುಲಿಟ್ಝರ್ ಪ್ರಶಸ್ತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News