ಮಧ್ಯಪ್ರದೇಶ:ಆಸ್ಪತ್ರೆಯಲ್ಲಿ ರೋಗಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ವ್ಯಕ್ತಿಯ ಬಂಧನ

Update: 2021-06-12 06:23 GMT

 ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ರೋಗಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಈ ಹಿಂದೆ ವ್ಯಕ್ತಿಯನ್ನು ಗಾಯಗೊಳಿಸಿದ್ದ, ನಂತರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುರುವಾರ ಈ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯದ ದೃಶ್ಯ ಸೆರೆಯಾಗಿದೆ.

NDTV ವರದಿಯ ಪ್ರಕಾರ, ಬೆಂಕಿಯಿಂದಾಗಿ ಸುಟ್ಟಗಾಯಕ್ಕೀಡಾಗಿರುವ  ದಾಮೋದರ್ ಕೋರಿ ಈಗ ಸಾಗರ್ ಜಿಲ್ಲೆಯ ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಆತನ  ಸ್ಥಿತಿ ಸ್ಥಿರವಾಗಿದೆ.

ಮಿಲನ್ ರಾಜಕ್ ಎಂದು ಗುರುತಿಸಲ್ಪಟ್ಟ ಆರೋಪಿ  ಆಸ್ಪತ್ರೆಯ ವರಾಂಡದಲ್ಲಿ ಲೈಟರ್ ಅನ್ನು ಹಿಡಿದುಕೊಂಡು ನಿಧಾನವಾಗಿ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ  ಕೋರಿಯ ಕಡೆಗೆ ಧಾವಿಸಿದ ಆರೋಪಿ ಆತನಿಗೆ ಬೆಂಕಿ ಹಚ್ಚಿದ್ದಾನೆ.
ಗೋಪಾಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಮಿಲನ್ ರಾಜಕ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಕಿಯನ್ನು ಹಚ್ಚಲು ಆರೋಪಿ ಪೆಟ್ರೋಲ್ ಬಳಸಿದ್ದಾನೆ ಎಂದು ಸಾಗರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಕುಶ್ವಾ NDTVಗೆ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ  ಸಂತ್ರಸ್ತನ ಹೇಳಿಕೆಯು ಮಿಲನ್ ರಾಜಕ್ ಬೆಂಕಿ ಹಚ್ಚಿರುವುದನ್ನು ಖಚಿತಪಡಿಸುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News