ಜಾರ್ಜ್ ಫ್ಲಾಯ್ಡ್ ಹತ್ಯಾ ಘಟನೆಯನ್ನು ಧೈರ್ಯದಿಂದ ಚಿತ್ರೀಕರಿಸಿದ್ದ ಯುವತಿಗೆ ಪುಲಿಟ್ಝರ್ ವಿಶೇಷ ಗೌರವ

Update: 2021-06-12 10:45 GMT

ನ್ಯೂಯಾರ್ಕ್: ಅಮೆರಿಕಾದಲ್ಲಿ ಕರಿಯ ಜನಾಂಗದ ಜಾರ್ಜ್ ಫ್ಲಾಯ್ಡ್ ನನ್ನು ಮಿನಿಯಾಪೋಲಿಸ್‍ನ ಪೊಲೀಸ್ ಅಧಿಕಾರಿಯೊಬ್ಬರು ನೆಲಕ್ಕೆ ಬೀಳಿಸಿ ಹತ್ಯೆಗೈದ ಸಂದರ್ಭದ ಘಟನಾವಳಿಗಳನ್ನು ತನ್ನ ಸೆಲ್ ಫೋನ್‍ನಲ್ಲಿ ಚಿತ್ರೀಕರಿಸಿ ನಂತರ ಜನಾಂಗೀಯ ಅನ್ಯಾಯದ ವಿರುದ್ಧ ಜಾಗತಿಕ ಆಂದೋಲನಕ್ಕೆ ಕಾರಣೀಕರ್ತಳಾದ ಹದಿಹರೆಯದ ಯುವತಿ ಡರ್ನೆಲ್ಲಾ ಫ್ರೇಝಿಯರ್‍ಗೆ ಪುಲಿಟ್ಝರ್ ಪ್ರಶಸ್ತಿ ಸಮಿತಿ ವಿಶೇಷ ಗೌರವ ನೀಡಿದೆ.

"ಜಾರ್ಜ್ ಫ್ಲಾಯ್ಡ್ ಹತ್ಯೆ ಘಟನಾವಳಿಗಳನ್ನು ಧೈರ್ಯದಿಂದ ಚಿತ್ರೀಕರಿಸಿ ನಂತರ ಪೊಲಿಸ್ ದೌರ್ಜನ್ಯದ ವಿರುದ್ಧ  ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿ ಸತ್ಯ ಮತ್ತು ನ್ಯಾಯಕ್ಕಾಗಿನ ಹೋರಾಟದಲ್ಲಿ ನಾಗರಿಕ ಪತ್ರಕರ್ತರ ಪ್ರಮುಖ ಪಾತ್ರವನ್ನು ಆಕೆ ಬಿಂಬಿಸಿದ್ದಾರೆ" ಎಂದು ಡರ್ನೆಲ್ಲಾಗೆ ನೀಡಿದ ಗೌರವದಲ್ಲಿ ಪುಲಿಟ್ಜರ್ ಮಂಡಳಿ ಹೇಳಿದೆ.

ಜಾರ್ಜ್ ಫ್ಲಾಯ್ಡ್ ಹತ್ಯೆ ಘಟನೆ ಮೇ 25, 2020ರಂದು ನಡೆದ ವೇಳೆ ಡರ್ನೆಲ್ಲಾಗೆ 17 ವರ್ಷ ವಯಸ್ಸು. ಪ್ರಕರಣದ ವಿಚಾರಣೆ ವೇಳೆ ತನ್ನ ಹೇಳಿಕೆ ನೀಡಿದ್ದ ಡರ್ನೆಲ್ಲಾ ತನ್ನ 9 ವರ್ಷದ ಸೋದರ ಸಂಬಂಧಿ ಬಾಲಕಿಯ ಜತೆಗೆ ರಸ್ತೆಯ ಅಂಚಿನಲ್ಲಿರುವ ಅಂಗಡಿಗೆ ತಿನಿಸು ತರಲು  ನಡೆದುಕೊಂಡು ಹೋಗುತ್ತಿದ್ದಾಗ ಪೊಲೀಸ್ ಅಧಿಕಾರಿ ರಸ್ತೆ ಬದಿಯಲ್ಲಿ ತನ್ನನ್ನು ಬಿಟ್ಟು ಬಿಡುವಂತೆ ಅಂಗಲಾಚುತ್ತಿದ್ದ ವ್ಯಕ್ತಿಯೊಬ್ಬನನ್ನು ನೆಲಕ್ಕೆ ಬೀಳಿಸಿದ್ದರು ಎಂದು  ಆರೋಪಿ ಮಾಜಿ ಅಧಿಕಾರಿ ಡೆರೆಕ್ ಚೌವಿನ್  ಕುರಿತಂತೆ ಆಕೆ ಹೇಳಿದ್ದಳು.

ತನ್ನ ಜತೆಗಿದ್ದವಳು ಈ ಘಟನೆ ನೋಡುವುದು ಬೇಡವೆಂದು ಆಕೆಯನ್ನು ಅಂಗಡಿಗೆ ಕಳುಹಿಸಿ ತಾನು ಮತ್ತೆ ಬಂದು ಘಟನೆ ಚಿತ್ರೀಕರಿಸಿದ್ದಾಗಿ ಆಕೆ ಹೇಳಿದ್ದಳಲ್ಲದೆ "ಅದು ಸರಿಯಾದ ಕ್ರಮವಾಗಿರಲಿಲ್ಲ, ಆತ ನೋವನನ್ನುಭವಿಸುತಿದ್ದ" ಎಂದು ಹೇಳಿದ್ದಳು. ತನಗೆ ಉಸಿರಾಡಲು ಆಗುತ್ತಿಲ್ಲ ಎಂದು ಫ್ಲಾಯ್ಡ್ ಸತತವಾಗಿ  ಹೇಳುತ್ತಾ ಕೊನೆಗೆ ಕೊನೆಯುಸಿರೆಳೆದಿರುವ  ಚಿತ್ರಣವನ್ನು ಆಕೆಯ ವೀಡಿಯೋ ತೋರಿಸಿತ್ತಲ್ಲದೆ ಅಧಿಕಾರಿಯ ವಿಚಾರಣೆ ವೇಳೆ ಇದು ಪ್ರಮುಖ ಸಾಕ್ಷ್ಯವಾಗಿತ್ತು. ಮುಂದೆ ಎಪ್ರಿಲ್ ತಿಂಗಳಿನಲ್ಲಿ ಆತನನ್ನು ದೋಷಿಯೆಂದು ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News