ಕೋಳಿ ತ್ಯಾಜ್ಯ ವಿಲೇವಾರಿಗೆ ದಿನಂಪ್ರತಿ 200 ರೂ. ನಿಗದಿ; ಮಾರಾಟಗಾರರ ಆಕ್ರೋಶ

Update: 2021-06-12 10:59 GMT

ಭಟ್ಕಳ : ನಗರದಲ್ಲಿ ಮಾರಾಟ ಮಾಡುತ್ತಿರುವ ಕೋಳಿ ಮಾಂಸ ಅಂಗಡಿಕಾರರಿಂದ ಅದರ ತ್ಯಾಜ್ಯ ವಿಲೇವಾರಿಗಾಗಿ ಪುರಸಭೆ ವತಿಯಿಂದ ದಿನಂಪ್ರತಿ 200 ರೂ. ನಿಗದಿ ಮಾಡಿದ್ದು ಕೋಳಿ ಮಾಂಸ ಮಾರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. 

ನಗರ ಹಾಗೂ ಜಾಲಿ ಪ.ಪಂ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕೋಳಿ ಮಾಂಸ ಮಾರಾಟ ಮಾಡುವ ಅಂಗಡಿಗಳಿದ್ದು ದಿನಕ್ಕೆ 200ರೂ ಕೊಡಿ ಎಂದರೆ ಎಲ್ಲಿಂದ ತಂದು ಕೊಡಬೇಕು ಎಂಬುದು ಚಿಕನ್ ವ್ಯಾಪಾರಿಗಳ ಪ್ರಶ್ನೆಯಾಗಿದೆ. 

ಈ ಕುರಿತಂತೆ ಮಾದ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿರುವ  ಚಿಕನ್ ವ್ಯಾಪಾರಿ ಸರ್ಫರಾಝ್ ಅಹ್ಮದ್, ಪುರಸಭೆ ಹಾಗೂ ಜಾಲಿ ಪಟ್ಟಣ ವ್ಯಾಪ್ತಿಯಲ್ಲಿ 50 ಕ್ಕೂ ಹೆಚ್ಚು ಚಿಕನ್ ವ್ಯಾಪಾರಿಗಳಿದ್ದಾರೆ.  ಪುರಸಭೆಯವರು ಒಂದು ದಿನಕ್ಕೆ 200 ಫೀ ತ್ಯಾಜ್ಯಕ್ಕೆ ನೀಡಿ ಎಂದರೆ ನಾವು ಅಂಗಡಿ ಬಾಡಿಗೆ, ಕೆಲಸದವರ ಸಂಬಳ ತೆಗಯುವುದಾದರೂ ಹೇಗೆ. ವ್ಯಾಪಾರವಿಲ್ಲದ ಸಮಯದಲ್ಲಿ ಪ್ರತಿ ದಿವಸ 200 ರೂ. ನೀಡುವುದು ಸಾಧ್ಯವಿಲ್ಲ. ಪುರಸಭೆ ಇರದ ಬಗ್ಗೆ ಯೋಚಿಸಬೇಕು ಎಂದರು.

ಆಗಿದ್ದೇನು: ನಗರದಲ್ಲಿ  ಕೋಳಿ ಅಂಗಡಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪುರಸಭೆಯವರು ಪ್ರತಿ ಅಂಗಡಿಗೆ ತಿಂಗಳಿಗೆ ರೂ. 1500 ದರ ನಿಗದಿ ಮಾಡಿ ಸಾಗರ ರೋಡನಲ್ಲಿರುವ ಘನತ್ಯಾಜ್ಯ ಘಟಕಕ್ಕೆ ಹಾಕುತ್ತಿದ್ದರು. ಕಳೆದ ಆರು ತಿಂಗಳ ಹಿಂದೆ ಉಡುಪಿ ಡಿಸೋಜಾ ಕಂಪೆನಿಯವರು ತಾಲ್ಲೂಕಿನಲ್ಲಿ ಉತ್ಪತ್ತಿಯಾಗುವ ಕೋಳಿ ತ್ಯಾಜ್ಯಗಳನ್ನು ಸಂಗ್ರಹಿಸಿ ಪ್ರಾಣಿ ಅಹಾರ ತಯಾರಿಕೆಗೆ ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ಪುರಸಭೆ, ಪಟ್ಟಣ ಪಂಚಾಯತ್ ನವರಿಗೂ ತ್ಯಾಜ್ಯ ವಿಲೇವಾರಿಯ ಭಾರ ಕಡಿಮೆಯಾಗಿ ನೆಮ್ಮದಿಯಿಂದ ಇದ್ದರು. ಆದರೆ, ಭಟ್ಜಳದಿಂದ ಕೋಳಿ ತ್ಯಾಜ್ಯ ಸಂಗ್ರಹಿಸುತ್ತಿದ್ದ ಡಿಸೋಜಾ ಕಂಪೆನಿಯ ವಾಹನ ಲಾಕ್ ಡೌನ ಸಮಯದಲ್ಲಿ ಭಟ್ಕಳಕ್ಕೆ ಬರಲಿಲ್ಲ. ಡಿಸೇಲ್ ದರ ನೆಪವೊಡ್ಡಿ ಕೋಳಿ ತ್ಯಾಜ್ಯ ಸಂಗ್ರಹಣೆ ನಿಲ್ಲಿಸಿದ ಡಿಸೋಜಾ ಕಂಪೆನಿ ವಾಹನ ಸಾಗಾಣೆ ವೆಚ್ಚ ನೀಡಿದರೆ ತ್ಯಾಜ್ಯ ಸಂಗ್ರಹಿಸುವುದಾಗಿ ತಿಳಿಸಿತು. ಕಳೆದೊಂದು ತಿಂಗಳಿನಿಂದ ಕೋಳಿ ತ್ಯಾಜ್ಯ ಸಮರ್ಪಕ   ವಿಲೇವಾರಿ ಮಾಡಲು ಸಾಧ್ಯವಾಗದ ಕಾರಣ ಪುರಸಭೆ ಶುಕ್ರವಾರ ಕೋಳಿ ಅಂಗಡಿ ಮಾಲಿಕರ ಸಭೆ ಕರೆದು ಕೋಳಿ ತ್ಯಾಜ್ಯ ವಿಲೇವಾರಿಗೆ ಪ್ರತಿದಿನ 200 ರೂ. ನೀಡುವಂತೆ ತಿಳಿಸಿದ್ದಾರೆ.

ದಿನಕ್ಕೆ 200 ರೂ. ಅಂದರೆ ಪ್ರತಿ ತಿಂಗಳು 6 ಸಾವಿರ ನೀಡುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೋಳಿ ಅಂಗಡಿ ಮಾಲಿಕರು  ಕೋವಿಡ್ ನಂತಹ ಸಂಕಷ್ಟ ಸಮಯದಲ್ಲಿ ಪ್ರತಿದಿವಸ 200 ರೂಪಾಯಿ ಲಾಭವಾಗದಿದ್ದರೂ ಪುರಸಭೆಗೆ 200 ರೂಪಾಯಿ ಕಟ್ಟಬೇಕು. ನಮ್ಮ ಹಣದಿಂದಲೇ ಅವರು ತ್ಯಾಜ್ಯ ತೆಗೆದಕೊಂಡು ಅವರು ಲಾಭ ಗಳಿಸುವುದಾದರೆ ನಮ್ಮ ಪಾಡೇನು. ತಿಂಗಳಿಗೆ 1500 ಬದಲಿಗೆ 6000 ನೀಡುವುದಾದರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಸ್ಪಷ್ಟೀಕರಣ ನೀಡಿರುವ ಪುರಸಭೆ ಮುಖ್ಯಾಧಿಕಾರಿ ದೇವರಾಜು, ಭಟ್ಜಳದಿಂದ ಕೋಳಿ ತ್ಯಾಜ್ಯ ಸಂಗ್ರಹಣೆ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ಉಡುಪಿಯವರು ಸಾಗಾಣಿಕೆ ವೆಚ್ಚ ನೀಡುವಂತೆ ಕಳೆದೊಂದು ತಿಂಗಳನಿಂದ ತ್ಯಾಜ್ಯ ತೆಗೆದುಕೊಂಡು ಹೋಗುತ್ತಿರಲಿಲ್ಲ. ಈಗ ಪುನಃ ಅವರ ಜೊತೆ ಮಾತನಾಡಿ ಅಂಗಡಿಕಾರರಿಂದ ಫೀ ವಸೂಲಿ ಮಾಡಿ ಅವರ ಸಾಗಾಣಿಕೆ ವೆಚ್ಚ ನೀಡಲು ನಿರ್ಧರಿಸಿದ್ದೇವೆ. ಅದರ ಮಾಹಿತಿ ಕೂಡ ಕೋಳಿ ಅಂಗಡಿಕಾರರ ಸಭೆ ಕರೆದು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News