ಪ್ರಧಾನಿ ಮೋದಿ 'ಹೇಡಿಯಂತೆ ವರ್ತಿಸುತ್ತಿದ್ದಾರೆ':ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: ಕೊರೋನವೈರಸ್ ಕಾಯಿಲೆಯ (ಕೋವಿಡ್ -19) ಎರಡನೇ ಅಲೆಯನ್ನು ನಿಭಾಯಿಸಿರುವ ಕುರಿತಾಗಿ ಕೇಂದ್ರ ಸರಕಾರದ ವಿರುದ್ಧ ಶನಿವಾರ ಸರಣಿ ದಾಳಿಗಳನ್ನು ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಪ್ರಜೆಗಳ ಯೋಗಕ್ಷೇಮಕ್ಕಿಂತ ರಾಜಕೀಯ ಹಾಗೂ ಪ್ರಚಾರವೇ ಮುಖ್ಯವಾಗಿದೆ ಎಂದು ಆರೋಪಿಸಿದ್ದಾರೆ.
‘ಜಿಮ್ಮೆದಾರ್ ಕೌನ್?’ (ಯಾರು ಹೊಣೆ?) ಅಭಿಯಾನದ ಒಂದು ಭಾಗವಾಗಿ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ, ಸಾಂಕ್ರಾಮಿಕ ದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ‘ಆಡಳಿತದಲ್ಲಿ ಅಸಮರ್ಥತೆ’ಪ್ರದರ್ಶನಗೊಂಡಿತು. ಪ್ರಧಾನ ಮಂತ್ರಿಯವರ "ಆಡಳಿತದಲ್ಲಿನ ಅಸಮರ್ಥತೆ" ಯನ್ನು ಇಡೀ ಜಗತ್ತು ಕಂಡಿದೆ ಎಂದರು.
"ಅವರು (ಪ್ರಧಾನಿ) ಸುಮ್ಮನೆ ಹಿಂದೆ ಸರಿದರು ಮತ್ತು ಕೆಟ್ಟದ್ದು ಹಾದುಹೋಗುವುದನ್ನು ಕಾಯುತ್ತಿದ್ದರು. ಭಾರತದ ಪ್ರಧಾನಿ ಹೇಡಿಯಂತೆ ವರ್ತಿಸಿದ್ದಾರೆ. ಅವರು ನಮ್ಮ ದೇಶವನ್ನು ನಿರಾಸೆಗೊಳಿಸಿದ್ದಾರೆ ”ಎಂದು ಪ್ರಿಯಾಂಕಾ ಗಾಂಧಿ ಅವರು ತಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್ ಖಾತೆಗಳಲ್ಲಿ ಪ್ರಕಟಿಸಿರುವ ಎರಡು ಪುಟಗಳ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
“ಪಿಎಂ ಮೋದಿಯವರು ಇತರ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡಲು ನಿರ್ಧರಿಸಿದಾಗ ತಮ್ಮ ಇಮೇಜ್ ಅನ್ನು ಹೆಚ್ಚಿಸಿಕೊಳ್ಲುವತ್ತ ಗಮನಹರಿಸಿದ್ದಾರೆ ಹಾಗೂ ತಮ್ಮ ದೇಶವಾಸಿಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ತನ್ನದೇ ಆದ ಇಮೇಜ್ ಅನ್ನು ಹೆಚ್ಚಿಸಲು ಪ್ರಪಂಚದಾದ್ಯಂತ ಉಚಿತ ಲಸಿಕೆಗಳನ್ನು ವಿತರಿಸುವ ಬದಲು ತಮ್ಮ ರಾಷ್ಟ್ರದ ಜನತೆಯನ್ನು ಮೊದಲು ರಕ್ಷಿಸಬೇಕಾಗಿತ್ತು. ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುವ ರೀತಿಯಲ್ಲಿ ನೋಂದಣಿ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿರುವುದನ್ನು ಜನರು ಗಮನಿಸುತ್ತಿದ್ದಾರೆ'' ಎಂದು ಪ್ರಿಯಾಂಕಾ ಹೇಳಿದ್ದಾರೆ.