ಲಕ್ಷದ್ವೀಪಕ್ಕೆ ಪ್ರವೇಶ ನಿರಾಕರಣೆ: 8 ಸಂಸದರಿಂದ ಆಡಳಿತಾಧಿಕಾರಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಜಾರಿ

Update: 2021-06-12 13:15 GMT
ಪ್ರಫುಲ್ ಖೋಡಾ ಪಟೇಲ್ (Twitter/@prafulkpatel)

ಹೊಸದಿಲ್ಲಿ: ಲಕ್ಷದ್ವೀಪ ಪ್ರವೇಶಕ್ಕೆ ಅನುಮತಿ ನಿರಾಕರಿಸಲ್ಪಟ್ಟ ನಂತರ ಎಂಟು ಮಂದಿ ಸಂಸದರು ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಜಾರಿಗೊಳಿಸಿದ್ದಾರೆ. ಜನಪ್ರತಿನಿಧಿಗಳಿಗೆ ಅಗೌರವ ತೋರಿಸಿದ್ದಕ್ಕಾಗಿ ಹಾಗೂ ಭಾರತದ ಭಾಗವಾಗಿರುವ ದ್ವೀಪ ಪ್ರವೇಶಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಯುಂಟುಮಾಡಿದ್ದಕ್ಕಾಗಿ ಈ ನೋಟಿಸ್ ಜಾರಿಗೊಳಿಸಲಾಗಿದೆ.

ಲಕ್ಷದ್ವೀಪದ ಆಡಳಿತಾಧಿಕಾರಿ ಜನವರಿಯಿಂದೀಚೆಗೆ ಜಾರಿಗೊಳಿಸಿರುವ ಹಲವಾರು ವಿವಾದಾತ್ಮಕ ನಿಯಮಗಳು ಹಾಗೂ ಅವುಗಳಿಂದ ಜನರ ಮೇಲುಂಟಾಗಿರುವ ಪರಿಣಾಮವನ್ನು ಅಧ್ಯಯನ ನಡೆಸಲು ಸಿಪಿಐ, ಸಿಪಿಎಂ, ಕೇರಳ ಕಾಂಗ್ರೆಸ್(ಎಂ) ಹಾಗೂ ಕೇರಳದ ಆಡಳಿತ ಎಡ ಸರಕಾರದ ಮಿತ್ರ ಪಕ್ಷವಾಗಿರುವ ಲೋಕತಾಂತ್ರಿಕ್ ಜನತಾ ದಳದ ಸಂಸದರು ದ್ವೀಪಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದರು.

ಭೇಟಿ ನೀಡಿದ ನಂತರ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸುವ ಉದ್ದೇಶ ಅವರಿಗಿತ್ತು.

ಸಂಸದರ ಪೈಕಿ ಆರು ಮಂದಿ- ಎಲಮರಂ ಕರೀಮ್, ಬಿನೊಯ್ ವಿಶ್ವಂ, ಎಂ ವಿ ಶ್ರೇಯಾಂಶ್ ಕುಮಾರ್, ವಿ ಶಿವದಾಸನ್, ಕೆ ಸೋಮಪ್ರಸಾದ್ ಹಾಗೂ ಜಾನ್ ಬ್ರಿಟ್ಟಸ್ ಅವರು ರಾಜ್ಯಸಭಾ ಸದಸ್ಯರಾಗಿರುವುದರಿಂದ ಮೇಲ್ಮನೆಯ ಮಹಾಕಾರ್ಯದರ್ಶಿಗಳಿಗೆ ತಮ್ಮ ನೋಟಿಸ್ ಹಸ್ತಾಂತರಿಸಿದ್ದರೆ ಉಳಿದ ಇಬ್ಬರಾದ ಸಿಪಿಎಂ ನ ಎ.ಎಂ. ಆರಿಫ್ ಹಾಗೂ ಕೇರಳ ಕಾಂಗ್ರೆಸ್ (ಎಂ) ನ ಥಾಮಸ್ ಚಝಿಕಡನ್ ಅವರು ಲೋಕಸಭೆಯ ಮಹಾಕಾರ್ಯದರ್ಶಿಗೆ  ತಮ್ಮ ನೋಟಿಸ್ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News