ಭಾರತದಲ್ಲಿ ಕೊರೋನ 2ನೇ ಅಲೆಗೆ ಕಾರಣವೇನು ಗೊತ್ತೇ?

Update: 2021-06-14 03:54 GMT

ಲಂಡನ್ : ಇಡೀ ಭಾರತವನ್ನು ಅಲ್ಲೋಲ ಕಲ್ಲೋಲಗೊಳಿಸಿದ ಕೊರೋನ ವೈರಸ್‌ನ ಎರಡನೇ ಅಲೆಗೆ ದೇಶದಲ್ಲಿ ಅವಧಿ ಪೂರ್ವವಾಗಿ ನಿರ್ಬಂಧಗಳನ್ನು ಮುಕ್ತಗೊಳಿಸಿದ್ದು ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸಡಿಲಿಸಿದ್ದು ಪ್ರಮುಖ ಕಾರಣಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಿ-7 ಶೃಂಗದಲ್ಲಿ ಸ್ಪಷ್ಟಪಡಿಸಿದೆ.

ಇದರ ಜತೆಗೆ ಹೊಸ ಪ್ರಬೇಧ ಹುಟ್ಟಿಕೊಂಡದ್ದು ಹಾಗೂ ಲಸಿಕೆ ಹಂಚಿಕೆಯ ಅಸಮಾನತೆ ಕೂಡಾ ಇದಕ್ಕೆ ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಆರೋಗ್ಯ ಯೋಜನೆಗಳ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ರಿಯಾನ್ ಈ ಬಗ್ಗೆ ವಿವರ ನೀಡಿ, "ಭಾರತದಲ್ಲಿ ಎರಡನೇ ಅಲೆಯ ವಿಕಾಸಕ್ಕೆ ಮುಖ್ಯ ಕಾರಣವೆಂದರೆ ಸಾಮಾಜಿಕ ನಿರ್ಬಂಧಗಳನ್ನು ಅವಧಿಗೆ ಮುನ್ನವೇ ಸಡಿಲಿಸಿದ್ದು, ವಿವಾಹ ಸಮಾರಂಭಗಳ ಸೀಸನ್, ಧಾರ್ಮಿಕ ಕಾಯಕ್ರಮಗಳು, ಸಂಚಾರದಲ್ಲಿ ಹೆಚ್ಚಳ ಮತ್ತು ಜನತೆ ಹೆಚ್ಚು ಹೆಚ್ಚಾಗಿ ಬೆರೆತದ್ದು, ಡೆಲ್ಟಾ ಪ್ರಬೇಧದ ವಿಕಾಸ" ಎಂದು ಹೇಳಿದರು.

ಡೆಲ್ಟಾ ಪ್ರಬೇಧ ಹೆಚ್ಚು ವ್ಯಾಪಕವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಹೆಚ್ಚು ಸಕ್ರಿಯ ಶಕ್ತಿಯನ್ನು ಹೊಂದಿರುವ ಈ ವೈರಸ್ ಹರಡಲು ಅವಕಾಶಗಳೂ ಸಿಕ್ಕಿದವು. ಹೀಗೆ ಸಾಮರ್ಥ್ಯ ಮತ್ತು ಅವಕಾಶ ಎರಡೂ ಸಿಕ್ಕಿದಾಗ ಭಾರತದಂಥ ಪರಿಸ್ಥಿತಿಯನ್ನು ಕಾಣಬಹುದಾಗಿದೆ ಎಂದು ವಿಶ್ಲೇಷಿಸಿದರು.

ಭಾರತದ ಈ ಸಮೂಹ ಸಾಂಕ್ರಾಮಿಕದ ಪರಿಣಾಮಗಳು ತೀವ್ರತರವಾಗಿ ಮುಂದುವರಿಯಲಿವೆ. ಇದು ಜಾಗತಿಕವಾಗಿ ನಿಯಂತ್ರಣಕ್ಕೆ ಬಂದಿರಬಹುದು. ಆದರೆ ಈ ರೋಗ ಭಾರತದಲ್ಲಿ ಹಳ್ಳಿಹಳ್ಳಿಗೆ ಪ್ರವೇಶಿಸಿರುವುದರಿಂದ ದೇಶದಲ್ಲಿ ಗಂಭೀರ ಸಮಸ್ಯೆ ಮುಂದುವರಿಯಲಿದೆ. ಹಲವು ಕಡೆಗಳಲ್ಲಿ ವೈದ್ಯಕೀಯ ಸಲಕರಣೆಗಳ ಕೊರತೆಯ ನಡುವೆಯೂ ಜನರ ಜೀವರಕ್ಷಣೆಗಾಗಿ ಆರೋಗ್ಯ ಕಾರ್ಯಕರ್ತರ ಶ್ರಮ ಶ್ಲಾಘನೀಯ" ಎಂದು ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News