ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದ ಸಂಸದರು, ಲೋಕಸಭೆಯಲ್ಲಿ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸಲು ಯತ್ನ

Update: 2021-06-14 05:20 GMT

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ  ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ)200 ಕ್ಕೂ ಹೆಚ್ಚು  ನಾಯಕರು ಈಗಾಗಲೇ  ಜೆಡಿಯುಗೆ ಸೇರ್ಪಡೆಯಾಗಿದ್ದು,  ಚಿರಾಗ್ ಪಾಸ್ವಾನ್ ನೇತೃತ್ವದ ಪಕ್ಷವು ಈಗ ಮತ್ತೊಂದು ಬಿಕ್ಕಟ್ಟನ್ನು ಎದುರಿಸುತ್ತಿದೆ.

ಲೋಕಸಭೆಯಲ್ಲಿ ಪಕ್ಷದ ಆರು ಸಂಸದರಲ್ಲಿ ಐವರು ಚಿರಾಗ್ ಪಾಸ್ವಾನ್ ಅವರನ್ನು ಲೋಕಸಭೆಯಲ್ಲಿ ಎಲ್ ಜೆ ಪಿ ನಾಯಕ  ಸ್ಥಾನದಿಂದ ತೆಗೆದುಹಾಕಲು ನಿರ್ಧರಿಸಿದ್ದಾರೆ ಎಂದು ಮೂಲಗಳು News 18 ಗೆ ತಿಳಿಸಿವೆ.

ಚಿರಾಗ್ ಪಾಸ್ವಾನ್ ಅವರ ಚಿಕ್ಕಪ್ಪ, ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ  ಸಹೋದರ ಪಶುಪತಿ ಕುಮಾರ್ ಪರಾಸ್ ನೇತೃತ್ವದಲ್ಲಿ ಎಲ್ ಜೆಪಿ ಸಂಸದರು ಬಂಡಾಯ ಸಾರಿದ್ದಾರೆ. ಕಳೆದ ವರ್ಷ ತನ್ನ ತಂದೆಯ ನಿಧನದ ಬಳಿಕ  ಎಲ್ ಜೆಪಿ ನಾಯಕತ್ವವನ್ನು ವಹಿಸಿಕೊಂಡಿದ್ದ ಚಿರಾಗ್ ಪಾಸ್ವಾನ್ ಈಗ ಏಕಾಂಗಿಯಾಗಿದ್ದಾರೆ.

ಚಿರಾಗ್ ಅವರ ಪಕ್ಷದ ಬಹುಪಾಲು ಲೋಕಸಭಾ ಸಂಸದರು ಚಿರಾಗ್ ಅವರನ್ನು ಬದಲಿಸಿ  ಹಾಜಿಪುರ ಸಂಸದ ಪಶುಪತಿ ಕುಮಾರ್ ಪರಾಸ್ ಅವರನ್ನು ಲೋಕಸಭೆಯಲ್ಲಿ ಎಲ್ ಜೆಪಿಯ ಹೊಸ ನಾಯಕರನ್ನಾಗಿ ಮಾಡಲು ಉದ್ದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ ಜೆಪಿ ಸಂಸದರು ಈಗಾಗಲೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಈ ಹೊಸ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಪತ್ರವೊಂದನ್ನು ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.

"ಎಲ್ ಜೆಪಿ ಸಂಸದರು ರವಿವಾರ ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಪಕ್ಷದ ಹೊಸ ಬೆಳವಣಿಗೆಗಳ ಬಗ್ಗೆ ಪತ್ರವೊಂದನ್ನು ಹಸ್ತಾಂತರಿಸಿದರು. ಲೋಕಸಭೆಯಲ್ಲಿ ಪಶುಪತಿ ಕುಮಾರ್ ಪರಾಸ್ ಅವರನ್ನು ಎಲ್ ಜೆಪಿಯ ಹೊಸ ನಾಯಕರನ್ನಾಗಿ ಪರಿಗಣಿಸುವಂತೆ ಅವರನ್ನು  ವಿನಂತಿಸಿದ್ದಾರೆ "ಎಂದು ಎಎನ್ಐ ವರದಿ ಮಾಡಿದೆ.

ಎಲ್ ಜೆಪಿ  ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಒಂದು ವರ್ಷದ ಹಿಂದೆ ನಿಧನರಾದ  ನಂತರ ಪಕ್ಷವನ್ನು ನಿರ್ವಹಿಸುವಲ್ಲಿ ಅವರ ಪುತ್ರ ಚಿರಾಗ್ ಪಾಸ್ವಾನ್ ವಿಫಲರಾಗಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಎಲ್ ಜೆ ಪಿಯ 200 ಕ್ಕೂ ಹೆಚ್ಚು ನಾಯಕರು ಬಿಹಾರದ ಸಂಯುಕ್ತ ಜನತಾದಳ (ಜೆಡಿಯು) ಗೆ ಸೇರಿದ್ದರು. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಎಲ್ ಜೆ ಪಿಯಿಂದ 208 ನಾಯಕರನ್ನು ಸೇರಿಸಿಕೊಳ್ಳುವುದಾಗಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News