×
Ad

ರಾಮಮಂದಿರಕ್ಕೆ ಸಂಗ್ರಹಿಸಿದ ದೇಣಿಗೆ ದುರ್ಬಳಕೆ ಆರೋಪದ ಬಗ್ಗೆ ಟ್ರಸ್ಟ್ ಸ್ಪಷ್ಟನೆ ನೀಡಬೇಕು: ಶಿವಸೇನೆ

Update: 2021-06-14 20:23 IST

ಮುಂಬೈ, ಜೂ.14: ಅಯೋಧ್ಯೆಯ ರಾಮಜನ್ಮಭೂಮಿ ಟ್ರಸ್ಟ್ ಖರೀದಿಸಿರುವ ಜಮೀನಿನ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವರದಿಯ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಶಿವಸೇನೆಯ ಸಂಸದ ಸಂಜಯ್ ರಾವತ್, ಮಂದಿರ ನಿರ್ಮಾಣ ಬಿಜೆಪಿಗಷ್ಟೇ ಅಲ್ಲ ಜನಸಾಮಾನ್ಯರಿಗೂ ನಂಬಿಕೆ ಹಾಗೂ ವಿಶ್ವಾಸದ ವಿಷಯವಾಗಿರುವುದರಿಂದ ಆರೋಪದ ಬಗ್ಗೆ ಟ್ರಸ್ಟ್‌ನ ಮುಖಂಡರು ಹಾಗೂ ಇತರರು ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದ್ದಾರೆ. ಇವತ್ತು(ಸೋಮವಾರ) ಬೆಳಿಗ್ಗೆ ಈ ವಿಷಯದ ಬಗ್ಗೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ತನಗೆ ಫೋನ್ ಮೂಲಕ ತಿಳಿಸಿದ್ದು ಅವರು ಒದಗಿಸಿರುವ ಪುರಾವೆ ಕಂಡು ಆಘಾತವಾಯಿತು ಎಂದು ರಾವತ್ ಹೇಳಿದರು.

ರಾಮ ದೇವರು ಹಾಗೂ ರಾಮಮಂದಿರದ ಹೋರಾಟ ನಮಗೆ ವಿಶ್ವಾಸದ ವಿಷಯವಾಗಿದ್ದರೆ ಕೆಲವರಿಗೆ ಇದೊಂದು ರಾಜಕೀಯ ಮಾಡುವ ವಿಷಯವಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಜನತೆ ದೇಣಿಗೆ ನೀಡಿದ್ದಾರೆ. ಶಿವಸೇನೆಯೂ 1 ಕೋಟಿ ರೂ. ದೇಣಿಗೆ ನೀಡಿದೆ. ಆದ್ದರಿಂದ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಟ್ರಸ್ಟ್ ಸ್ಪಷ್ಟೀಕರಣ ನೀಡಬೇಕು. ಮಂದಿರದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉ.ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಕೂಡಾ ಈ ವಿಷಯದಲ್ಲಿ ಮಾತನಾಡಬೇಕಿದೆ. ವಿಶ್ವಾಸದ ಆಧಾರದಲ್ಲಿ ಸಂಗ್ರಹಿಸಿದ ಹಣದ ದುರ್ಬಳಕೆಯಾಗಿದೆ ಎಂದರೆ, ವಿಶ್ವಾಸಕ್ಕೆ ಬೆಲೆಯಿಲ್ಲವೇ ?. ಏನು ನಡೆದಿದೆ ಎಂಬುದು ನಮಗೆ ತಿಳಿಯಬೇಕಾಗಿದೆ ಎಂದು ರಾವತ್ ಆಗ್ರಹಿಸಿದರು.

ಟ್ರಸ್ಟ್‌ನ ಸದಸ್ಯರನ್ನು ಬಿಜೆಪಿ ನೇಮಿಸಿದೆ. ರಾಮಮಂದಿರ ಚಳವಳಿಯಲ್ಲಿ ಶಿವಸೇನೆಯೂ ಪಾಲ್ಗೊಂಡಿರುವುದರಿಂದ ಶಿವಸೇನೆಯನ್ನೂ ಟ್ರಸ್ಟ್ ಸದಸ್ಯರನ್ನಾಗಿ ನೇಮಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು ಎಂದು ರಾವತ್ ಹೇಳಿದ್ದಾರೆ. ರಾಮಮಂದಿರದ ಕಟ್ಟಡದ ಬಳಿಯಿರುವ ಸುಮಾರು 2 ಕೋಟಿ ರೂ. ಮೌಲ್ಯದ ಜಮೀನನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಮಮಂದಿರಕ್ಕಾಗಿ 18.5 ಕೋಟಿ ರೂ.ಗೆ ಖರೀದಿಸಿದ್ದಾರೆ ಎಂಬ ಆರೋಪ ಇದಾಗಿದೆ. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹಾಗೂ ಉತ್ತರಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಈ ಆರೋಪ ಮಾಡಿದ್ದು, ಸಿಬಿಐ ಮತ್ತು ಜಾರಿನಿರ್ದೇಶನಾಲಯದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಆರೋಪವನ್ನು ಚಂಪತ್ ರಾಯ್ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News