ಐಕಳ: ವಿದ್ಯುತ್ ಪ್ರವಹಿಸಿ ವ್ಯಕ್ತಿ ಮೃತ್ಯು

Update: 2021-06-14 17:26 GMT

ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳೆಪಾಡಿ ಪುರಂಜ ಗುಡ್ಡೆ ಎಂಬಲ್ಲಿ ಮನೆಯಲ್ಲಿ ವಿದ್ಯುತ್ ಪ್ರವಹಿಸಿ ಮನೆ ಯಜಮಾನ ದಾರುಣ ಸಾವನ್ನಪ್ಪಿದ ಘಟನೆ ನಡೆದಿದೆ. 

ಮೃತರನ್ನು ಮಾಧವ ಆಚಾರ್ಯ (55) ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ ವೇಳೆಗೆ ಭಾರಿ ಮಳೆ ಗಾಳಿಯಿಂದ ಮಾಧವ ಆಚಾರ್ಯ ಮನೆಗೆ ಮರದ ಗೆಲ್ಲು ಬಿದ್ದಿದ್ದು ವಿದ್ಯುತ್ ಅಸ್ತವ್ಯಸ್ತ ಗೊಂಡಿತ್ತು. ಈ ಬಗ್ಗೆ ಕಿನ್ನಿಗೋಳಿ ಮೆಸ್ಕಾಂ ರವರನ್ನು ಸಂಪರ್ಕಿಸಿದಾಗ ಅವರು ಮರದ ಗೆಲ್ಲು ಕಡಿಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅದರಂತೆ ಮನೆಯವರು ಮರ ಕಡಿದಿದ್ದು, ರವಿವಾರ ಕಿನ್ನಿಗೋಳಿ ಮೆಸ್ಕಾಂ ಸಿಬ್ಬಂದಿ ಬಂದು ತಾತ್ಕಾಲಿಕ ನೆಲೆಯಲ್ಲಿ ಮನೆಯೆದುರಿನ ಭಾಗದಲ್ಲಿ ವಿದ್ಯುತ್ ವಯರ್ ಗಳನ್ನು ಸಿಕ್ಕಿಸಿ ಮನೆಯವರಿಗೆ ಎಚ್ಚರಿಕೆ ನೀಡಿ ಹೋಗಿದ್ದರು ಎಂದು ತಿಳಿದುಬಂದಿದೆ.

ಈ ನಡುವೆ ಮೆಸ್ಕಾಂ ಸಿಬ್ಬಂದಿಗಳು ಹೋದಮೇಲೆ ಮನೆಯವರು ಗಾಳಿ ಮಳೆಯಿಂದ ಹಾನಿಗೀಡಾದ ಮನೆಯ ಹಂಚನ್ನು  ಸರಿಪಡಿಸಲು ಮುಂದಾಗಿ ಸಂಬಂಧಿಕರಾದ ಜನಾರ್ದನ ಆಚಾರ್ಯ ಎಂಬವರು ಮೇಲ್ಗಡೆ ಏಣಿ ಇಟ್ಟಾಗ ಆಯ ತಪ್ಪಿ ಏಣಿ ವಿದ್ಯುತ್ ವಯರ್ ತಾಗಿದ್ದು, ಈ ಸಂದರ್ಭ ಏಣಿ ಮೇಲೆ ನಿಂತಿದ್ದ ವ್ಯಕ್ತಿ ಕೆಳಗೆ ಬೀಳುವ ಹಂತದಲ್ಲಿದ್ದಾಗ ಮಾಧವ ಆಚಾರ್ಯ ಏಣಿಯನ್ನು ಹಿಡಿದಿದ್ದು ವಿದ್ಯುತ್ ಪ್ರವಹಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಕಿನ್ನಿಗೊಳಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ.

ಮೃತರು ಮರದ ಕೆಲಸ ಮತ್ತು ಬಾವಿಗೆ ನೀರು ನೋಡುವ ತಜ್ಞರಾಗಿದ್ದು ಇಬ್ಬರು ಪುತ್ರಿ ಹಾಗುವ ಓರ್ವ ಪುತ್ರನನ್ನು ಅಗಲಿದ್ದಾರೆ . ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಐಕಳ ಗ್ರಾ ಪಂ ಸದಸ್ಯ ರಾಜೇಶ್ ಶೆಟ್ಟಿ ಮಾಜಿ ಅಧ್ಯಕ್ಷ ದಿವಾಕರ ಚೌಟ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News