ಎಲ್ ಜೆಪಿ ವಿಭಜನೆ:ಆರ್ ಜೆಡಿಗೆ ಸೇರಲು ಚಿರಾಗ್ ಪಾಸ್ವಾನ್ ಗೆ ಆಹ್ವಾನ

Update: 2021-06-15 06:18 GMT

ಪಾಟ್ನಾ: ಚಿರಾಗ್ ಪಾಸ್ವಾನ್ ಅವರ ಚಿಕ್ಕಪ್ಪ ಹಾಗೂ  ಹಾಜಿಪುರ ಸಂಸದ ಪಶುಪತಿ ಕುಮಾರ್ ಪರಾಸ್ ನಾಲ್ವರು ಸಂಸದರ ಬೆಂಬಲದೊಂದಿಗೆ ಲೋಕಸಭೆಯಲ್ಲಿ ಎಲ್ ಜೆಪಿಯ ಸಂಸದೀಯ ಪಕ್ಷದ ನಾಯಕರಾದ ನಂತರ  ಎಲ್ ಜೆಪಿ ವಿಭಜನೆಯಾಗಿದೆ.  ಹೀಗಾಗಿ ಜಮುಯಿ ಸಂಸದ ಚಿರಾಗ್ ಪಾಸ್ವಾನ್ ಅವರನ್ನು ತನ್ನ ಪಕ್ಷಕ್ಕೆ ಸೇರುವಂತೆ ಆರ್ ಜೆಡಿ ಆಹ್ವಾನಿಸಿದೆ.

ಎಲ್ ಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸೇರಲು ಇಚ್ಛಿಸಿದರೆ ತಮ್ಮ ಪಕ್ಷವು ಚಿರಾಗ್ ಅವರನ್ನು ಸ್ವಾಗತಿಸುತ್ತದೆ ಎಂದು ಮ್ಯಾನರ್ ಆರ್ ಜೆಡಿ ಶಾಸಕ ಭಾಯಿ ವೀರೇಂದ್ರ ಹೇಳಿದರು.

ಇಬ್ಬರು ಯುವ ನಾಯಕರು (ತೇಜಸ್ವಿ ಪ್ರಸಾದ್ ಯಾದವ್ ಹಾಗೂ  ಚಿರಾಗ್) ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಾರೆ ಎಂದು ವೀರೇಂದ್ರ ಹೇಳಿದರು.

"ತೇಜಸ್ವಿ ಬಿಹಾರದಲ್ಲಿ ಪಕ್ಷದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ, ಚಿರಾಗ್ ದಿಲ್ಲಿಯಲ್ಲಿ ಪಕ್ಷದ ರಾಜಕೀಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ" ಎಂದು ಅವರು ಅಭಿಪ್ರಾಯಪಟ್ಟರು.

ಎಲ್‌ಜೆಪಿಯಲ್ಲಿನ ವಿಭಜನೆಯ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಜೆಡಿಯ ರಾಜ್ಯಸಭಾ ಸದಸ್ಯ ಮನೋಜ್ ಜಾ,  ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧಿಕೃತ ನಿವಾಸವಾದ ಅನ್ನಿ ಮಾರ್ಗ್‌ನಲ್ಲಿ ಎಲ್ ಜೆಪಿ ವಿಭಜನೆಯ ಸ್ಟ್ರಿಪ್ಟ್ ರಚಿಸಲಾಗಿದೆ ಎಂದು ಆರೋಪಿಸಿದರು.

ನಿತೀಶ್ ಅವರು "ಜಮೀರ್ ಹಾಗೂ  ಜಮೀನ್" ವಿಷಯದಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

 2020 ರ ವಿಧಾನಸಭಾ ಚುನಾವಣೆಯಲ್ಲಿ ಅವರು 'ಜಮೀನ್' (ಬೆಂಬಲ ನೆಲೆ) ಯನ್ನು ಕಳೆದುಕೊಂಡರೆ, ರಾಜಕೀಯ ಪಕ್ಷಗಳಲ್ಲಿ ಒಡಕು ಉಂಟುಮಾಡುವ ಅವರ ಕ್ರಮವು 'ಜಮೀರ್' (ಸಿದ್ಧಾಂತ) ವನ್ನು ಕಳೆದುಕೊಳ್ಳುವ ಸುಳಿವು ನೀಡಿದೆ ಎಂದು ಅವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News