ಧರ್ಮ ಪ್ರಚಾರಕ್ಕೆ ಹುದ್ದೆ ಬಳಸದಂತೆ ಐಎಂಎ ಮುಖ್ಯಸ್ಥರಿಗೆ ನೀಡಿದ್ದ ಆದೇಶಕ್ಕೆ ತಡೆ ನೀಡಲು ದಿಲ್ಲಿ ಹೈಕೋರ್ಟ್ ನಿರಾಕರಣೆ
ಹೊಸದಿಲ್ಲಿ, ಜೂ. 15: ಯಾವುದೇ ಧರ್ಮವನ್ನು ಪ್ರಚಾರ ಮಾಡಲು ಭಾರತೀಯ ವೈದ್ಯಕೀಯ ಸಂಘಟನೆ ವೇದಿಕೆ ಬಳಸುವುದನ್ನು ತಡೆಯುವಂತೆ ಭಾರತೀಯ ವೈದ್ಯಕೀಯ ಸಂಘಟನೆ ಮುಖ್ಯಸ್ಥ ಜಾನ್ರೋಸ್ ಆಸ್ಟಿನ್ ಜಯಲಾಲ್ಗೆ ನಿರ್ದೇಶಿಸಿ ವಿಚಾರಣಾ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆ ವಿಧಿಸಲು ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ನಿರಾಕರಿಸಿದೆ. ಭಾರತೀಯ ವೈದ್ಯಕೀಯ ಸಂಘಟನೆಯ ಮುಖ್ಯಸ್ಥರಿಂದ ಇಂತಹ ಲಘು ಹೇಳಿಕೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಆಶಾ ಮೆನನ್ ಅವರು ಜಯಲಾಲ್ ಅವರಿಗೆ ಎಚ್ಚರಿಕೆ ನೀಡಿದರು.
ದೂರುದಾರರ ಪರವಾಗಿ ಯಾರೂ ಹಾಜರಾಗದಿರುವುದರಿಂದ ವಿಚಾರಣಾ ನ್ಯಾಯಾಲಯ ಜೂನ್ 4ರಂದು ನೀಡಿದ ಆದೇಶದ ವಿರುದ್ಧ ಜಯಲಾಲ್ ಅವರು ಸಲ್ಲಿಸಿದ್ದ ಮನವಿಯ ಮೇಲೆ ಆದೇಶ ನೀಡಲು ಮೆನನ್ ನಿರಾಕರಿಸಿದರು. ಅಲ್ಲದೆ ಮುಂದಿನ ವಿಚಾರಣೆಯನ್ನು ಜೂನ್ 16ಕ್ಕೆ ನಿಗದಿಪಡಿಸಿದರು. ಜಯಲಾಲ್ ಅವರು ಕೊರೋನ ರೋಗದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಆಯುರ್ವೇದಕ್ಕಿಂತ ಅಲೋಪತಿಯ ಶ್ರೇಷ್ಠತೆಯನ್ನು ಸಾಬೀತುಪಡಿಸುವ ಸೋಗಿನಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುವ ಮೂಲಕ ಹಿಂದೂ ಧರ್ಮದ ವಿರುದ್ಧ ಮಾನ ಹಾನಿಕರ ಪ್ರಚಾರ ಆರಂಭಿಸಿದ್ದಾರೆ ಎಂದು ದೂರುದಾರ ರೋಹಿತ್ ಜಾ ಆರೋಪಿಸಿದ್ದಾರೆ.
‘‘ಕ್ರಿಶ್ಚಿಯನ್ ಹಾಗೂ ಅಲೋಪತಿ ಒಂದೇ ಎಂದು ಹೇಳುವುದು ಹಾಗೂ ಅದು ಪಾಶ್ಚಿಮಾತ್ಯ ಜಗತ್ತಿನ ಉಡುಗೊರೆ ಎಂಬುದು ಅತ್ಯಂತ ತಪ್ಪಾದ ಪ್ರತಿಪಾದನೆಯಾಗಿದೆ’’ ಎಂದು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಗೋಯಲ್ ತಮ್ಮ ಆದೇಶದಲ್ಲಿ ಹೇಳಿದ್ದರು. ‘‘ವೈದ್ಯರ ಕಲ್ಯಾಣದ ಉದ್ದೇಶ ಹಾಗೂ ಗುರಿಯನ್ನು ಹೊಂದಿರುವ ಪ್ರತಿಷ್ಠಿತ ಸಂಸ್ಥೆ ಭಾರತೀಯ ವೈದ್ಯಕೀಯ ಸಂಸ್ಥೆ. ಇಂತಹ ಸಂಸ್ಥೆಯನ್ನು ಯಾವುದೇ ಧರ್ಮದ ಕುರಿತು ಯಾವುದೇ ವ್ಯಕ್ತಿಯ ನಿಲುವನ್ನು ಪ್ರಚಾರ ಮಾಡಲು ಬಳಸಬಾರದು’’ ಎಂದು ಅವರು ಹೇಳಿದ್ದಾರೆ.
ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವ ಸಲುವಾಗಿ ಜಯಲಾಲ್ ಅವರು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಝಾ ತಮ್ಮ ದೂರಿನಲ್ಲಿ ಆರೋಪಿಸಿದ್ದರು. ಜಯಲಾಲ್ ಅವರ ಲೇಖನ ಹಾಗೂ ಸಂದರ್ಶನಗಳನ್ನು ಉಲ್ಲೇಖಿಸಿ ಝಾ, ಹಿಂದೂ ಧರ್ಮ ಹಾಗೂ ಆಯುರ್ವೇದದ ಬಗ್ಗೆ ಯಾವುದೇ ಮಾನ ಹಾನಿಕರ ಅಂಶಗಳನ್ನು ಪ್ರಕಟಿಸುವುದು, ಮಾಧ್ಯಮದಲ್ಲಿ ಮಾತನಾಡುವುದು, ಲೇಖನ ಬರೆಯುವುದನ್ನು ತಡೆಯಲು ನಿರ್ದೇಶನ ನೀಡುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.