ಯೆಮೆನ್ ಸಮುದ್ರದಲ್ಲಿ ನೌಕಾ ದುರಂತ: ನೂರಾರು ವಲಸಿಗರ ಸಾವಿನ ಭೀತಿ

Update: 2021-06-15 15:38 GMT

ಅಲ್-ಮುಕಲ್ಲಾ,ಜೂ.15: ಯೆಮೆನ್ ನ ಲಹ್ಜ್ ಪ್ರಾಂತ್ಯದಾಚೆ ಸಮುದ್ರದಲ್ಲಿ ನೌಕೆಯೊಂದು ದುರಂತಕ್ಕೀಡಾಗಿದ್ದು, ನೂರಾರು ಆಫ್ರಿಕನ್ ವಲಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಭೀತಿ ವ್ಯಕ್ತವಾಗಿದೆ.

ಲಹ್ಜ್ ನ ರಾಸ್ ಅಲರಾದ ಮೀನುಗಾರರು ಕನಿಷ್ಠ 25 ಶವಗಳನ್ನು ನೀರಿನಿಂದ ಹೊರಕ್ಕೆ ತೆಗೆದಿದ್ದು,ಇನ್ನಷ್ಟು ಶವಗಳು ಪತ್ತೆಯಾಗುತ್ತಲೇ ಇವೆ ಎಂದು ಸ್ಥಳೀಯ ಸರಕಾರಿ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

300ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಮತ್ತು ಸ್ಥಳೀಯರು ಅವಸರದಿಂದ ಕೆಲವು ಶವಗಳನ್ನು ದಫನ ಮಾಡಿದ್ದಾರೆ ಎಂದು ಸ್ಥಳೀಯ ಕೋಸ್ಟ್ ಗಾರ್ಡ್ ಅಧಿಕಾರಿಯೋರ್ವರು ಹೇಳಿದರು.

ರಾಸ್ ಅಲರಾ ತೀರದಾಚೆ ವಲಸಿಗರಿದ್ದ ನೌಕೆಯು ಹಡಗಿಗೆ ಡಿಕ್ಕಿ ಹೊಡೆದ ಬಳಿಕ ಸಮುದ್ರದಲ್ಲಿ ಮುಳುಗಿದ್ದ ಸುಮಾರು 150 ಜನರ ಶವಗಳನ್ನು ಮೀನುಗಾರರು ಪತ್ತೆ ಹಚ್ಚಿದ್ದಾರೆ. ನೌಕೆಯಲ್ಲಿ ಸುಮಾರು 400 ವಲಸಿಗರಿದ್ದು, ಇವರೆಲ್ಲ ಹಾರ್ನ್ ಆಫ್ ಆಫ್ರಿಕಾದಿಂದ ಯೆಮೆನ್ ತೀರದತ್ತ ಪ್ರಯಾಣಿಸುತ್ತಿದ್ದರು. ಮೃತರಲ್ಲಿ ನಾಲ್ವರು ಯೆಮೆನ್ ಪ್ರಜೆಗಳೂ ಸೇರಿದ್ದಾರೆ ಎಂದು ಏಡನ್ನ ಅಲ್-ಅಯ್ಯಾಮ್ ದೈನಿಕವು ವರದಿ ಮಾಡಿದೆ.
ಘಟನೆಯ ಬಗ್ಗೆ ತನಗೆ ಮಾಹಿತಿ ಲಭಿಸಿದೆ ಎಂದು ವಿಶ್ವಸಂಸ್ಥೆಯ ‘ವಲಸಿಗರಿಗಾಗಿ ಅಂತರರಾಷ್ಟ್ರೀಯ ಸಂಸ್ಥೆ (ಐಒಎಂ)’ಯು ಟ್ವೀಟಿಸಿದೆ. ಆದರೆ ಅದು ಸಾವುಗಳ ಸಂಖ್ಯೆಯನ್ನು ತಿಳಿಸಿಲ್ಲ.

ಯುದ್ಧ ಮತ್ತು ಕೊರೋನವೈರಸ್ ಸಾಂಕ್ರಾಮಿಕದ ಭೀತಿಯಿದ್ದರೂ ಪ್ರತಿವರ್ಷ ಸಾವಿರಾರು ಆಫ್ರಿಕನ್ ವಲಸಿಗರು ಯೆಮನ್ ತೀರಕ್ಕೆ ಆಗಮಿಸುವುದು ಮುಂದುವರಿದಿದೆ. ಯೆಮೆನ್ ಅನ್ನು ತಾತ್ಕಾಲಿಕ ತಂಗುದಾಣವನ್ನಾಗಿ ಬಳಸಿಕೊಳ್ಳುವ ಅವರು ನಂತರ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News