ಗಲ್ವಾನ್ ಘರ್ಷಣೆಯ ಬಳಿಕ ಶೇ.43ರಷ್ಟು ಭಾರತೀಯರು ‘ಮೇಡ್ ಇನ್ ಚೈನಾ’ ಉತ್ಪನ್ನಗಳನ್ನು ಖರೀದಿಸಿಲ್ಲ: ಸಮೀಕ್ಷೆ

Update: 2021-06-15 16:00 GMT

ಹೊಸದಿಲ್ಲಿ,ಜೂ.15: ಕಳೆದ ವರ್ಷ ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವಿನ ಘರ್ಷಣೆಯ ಬಳಿಕ ಕನಿಷ್ಠ ಶೇ.43ರಷ್ಟು ಭಾರತೀಯ ಗ್ರಾಹಕರು ಒಂದೇ ಒಂದು ‘ಮೇಡ್ ಇನ್ ಚೈನಾ’ ಉತ್ಪನ್ನವನ್ನು ಖರೀದಿಸಿಲ್ಲ ಎಂದು ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ ಸರ್ಕಲ್ಸ್ ನಡೆಸಿರುವ ಅಧ್ಯಯನವೊಂದು ಬಹಿರಂಗಗೊಳಿಸಿದೆ.

ಗಲ್ವಾನ್ ಘರ್ಷಣೆಯ ನಂತರದ 12 ತಿಂಗಳುಗಳಲ್ಲಿ ಶೇ.34ರಷ್ಟು ಗ್ರಾಹಕರು ಕೇವಲ ಒಂದು ಅಥವಾ ಎರಡು ಚೀನಿ ಉತ್ಪನ್ನಗಳನ್ನು ಖರೀದಿಸಿದ್ದರೆ,ಶೇ.8ರಷ್ಟು ಜನರು ಮೂರರಿಂದ ಐದು ಚೀನಿ ಉತ್ಪನ್ನಗಳನ್ನು ಖರೀದಿಸಿದ್ದರು.

ಶೇ.4ರಷ್ಟು ಗ್ರಾಹಕರು 5ರಿಂದ 10,ಶೇ.3ರಷ್ಟು ಜನರು 10ರಿಂದ 15,ಶೇ.1ರಷ್ಟು ಜನರು 20ಕ್ಕೂ ಅಧಿಕ ಮತ್ತು ಇನ್ನೊಂದು ಶೇ.1ರಷ್ಟು ಜನರು 15ರಿಂದ 20 ಚೀನಿ ಉತ್ಪನ್ನಗಳನ್ನು ಖರೀದಿಸಿದ್ದರು. ಶೇ.6ರಷ್ಟು ಗ್ರಾಹಕರು ಯಾವುದೇ ಅಭಿಪ್ರಾಯವನ್ನು ನೀಡಿಲ್ಲ. ಸಮೀಕ್ಷೆಯಲ್ಲಿ ಪ್ರಶ್ನೆಗೆ 9,052 ಉತ್ತರಗಳು ಲಭಿಸಿದ್ದವು.

ಭಾರತದಾದ್ಯಂತ 281 ಜಿಲ್ಲೆಗಳಲ್ಲಿ ನಡೆಸಲಾದ ಒಟ್ಟಾರೆ ಸಮೀಕ್ಷೆಯಲ್ಲಿ 17,800 ಉತ್ತರಗಳು ಲಭಿಸಿದ್ದು,ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.67ರಷ್ಟು ಪುರುಷರಿದ್ದರೆ,ಶೇ.33ರಷ್ಟು ಮಹಿಳೆಯರಾಗಿದ್ದರು. ಇವರ ಪೈಕಿ ಶೇ.44ರಷ್ಟು ಜನರು ಮೊದಲ ಶ್ರೇಣಿಯ,ಶೇ.31ರಷ್ಟು ಜನರು ಎರಡನೇ ಶ್ರೇಣಿಯ ಮತ್ತು ಶೇ.25ರಷ್ಟು ಜನರು 3 ಮತ್ತು 4ನೇ ಶ್ರೇಣಿಯ ನಗರಗಳು ಹಾಗೂ ಗ್ರಾಮೀಣ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News