ವಿದೇಶಿ ಫಂಡ್ ಗಳ ಸ್ತಂಭನ ವರದಿಗಳನ್ನು ನಿರಾಕರಿಸಿದ್ದರೂ ಅದಾನಿ ಗ್ರೂಪ್ ನ ಮೂರು ಶೇರುಗಳಲ್ಲಿ ಶೇ.5 ಕುಸಿತ

Update: 2021-06-15 16:19 GMT

ಹೊಸದಿಲ್ಲಿ,ಜೂ.15: ಅದಾನಿ ಗ್ರೂಪ್ ನ 43,000 ಕೋ.ರೂ.ಗೂ ಹೆಚ್ಚಿನ ಮೌಲ್ಯದ ಶೇರುಗಳನ್ನು ಹೊಂದಿರುವ ಮೂರು ವಿದೇಶಿ ಫಂಡ್ ಗಳ ಖಾತೆಗಳನ್ನು ಸೋಮವಾರ ವರದಿಯಾಗಿದ್ದಂತೆ ಸ್ತಂಭನಗೊಳಿಸಿಲ್ಲ ಮತ್ತು ಅವು ಸಕ್ರಿಯವಾಗಿವೆ ಎಂದು ನ್ಯಾಷನಲ್ ಸೆಕ್ಯೂರಿಟಿಸ್ ಡಿಪೋಸಿಟರಿ ಲಿ.(ಎನ್ಎಸ್ಡಿಎಲ್) ಸ್ಪಷ್ಟೀಕರಣವನ್ನು ನೀಡಿದ್ದರೂ ಮಂಗಳವಾರ ಎರಡು ಶೇರುಗಳನ್ನು ಹೊರತುಪಡಿಸಿ ಗ್ರೂಪ್ ನ ಎಲ್ಲ ಶೇರುಗಳೂ ಬಾಂಬೆ ಶೇರು ವಿನಿಮಯ ಕೇಂದ್ರದಲ್ಲಿ ನಷ್ಟವನ್ನು ಅನುಭವಿಸಿವೆ.

ಮಂಗಳವಾರ ದಿನದ ವಹಿವಾಟು ಅಂತ್ಯಗೊಂಡಾಗ ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಎಂಟರ್ ಪ್ರೈಸಸ್ ನ ಶೇರುಗಳು ಅನುಕ್ರಮವಾಗಿ ಶೇ.2.79 ಮತ್ತು ಶೇ.2.45 ಗಳಿಕೆಯೊಂದಿಗೆ ಮುಕ್ತಾಯಗೊಂಡಿದ್ದರೆ, ಅದಾನಿ ಪೋರ್ಟ್ಸ್ ಶೇರು ಶೇ.0.94 ಕುಸಿತವನ್ನು ದಾಖಲಿಸಿದೆ. ಅದಾನಿ ಪವರ್,ಅದಾನಿ ಟ್ರಾನ್ಸ್‌ಮಿಷನ್ ಮತ್ತು ಅದಾನಿ ಟೋಟಲ್ ಗ್ಯಾಸ್ ನ ಶೇರುಗಳು ಅನುಕ್ರಮವಾಗಿ ಶೇ.4.97, ಶೇ.5 ಮತ್ತು ಶೇ.5ರಷ್ಟು ನಷ್ಟದಲ್ಲಿ ಮುಕ್ತಾಯಗೊಂಡು ಲೋವರ್ ಸರ್ಕ್ಯೂಟ್ ಲಿಮಿಟ್ನಲ್ಲಿ ಲಾಕ್ ಆಗಿವೆ.

ಶೇರು ವಿನಿಮಯ ಕೇಂದ್ರಗಳು ಪ್ರತಿ ಶೇರಿನ ಮಾರುಕಟ್ಟೆ ಬೆಲೆಯ ಶೇಕಡಾವಾರು ಪ್ರಮಾಣವನ್ನು ಲೋವರ್ ಮತ್ತು ಅಪ್ಪರ್ ಸರ್ಕ್ಯೂಟ್ ಲಿಮಿಟ್ ಎಂದು ನಿಗದಿಗೊಳಿಸುತ್ತವೆ ಮತ್ತು ದಿನದ ವಹಿವಾಟಿನಲ್ಲಿ ಈ ಶೇರುಗಳ ಬೆಲೆಗಳು ಈ ಮಿತಿಗಳ ನಡುವೆಯೇ ಬದಲಾಗುತ್ತಿರುತ್ತವೆ. ಶೇರಿನ ಬೆಲೆಯು ಯಾವುದೇ ಮಿತಿಯನ್ನು ತಲುಪಿದಾಗ ಸದ್ರಿ ಶೇರಿನಲ್ಲಿ ವಹಿವಾಟನ್ನು ನಿಗದಿತ ಸಮಯಕ್ಕೆ ಅಥವಾ ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗುತ್ತದೆ.
 
ಅಲ್ಬುಲಾ ಇನ್ವೆಸ್ಟ್‌ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್‌ಮೆಂಟ್ ಫಂಡ್ ಇವುಗಳ ಖಾತೆಗಳನ್ನು ಎನ್ಎಸ್ಡಿಎಲ್ ಸ್ಥಗಿತಗೊಳಿಸಿದೆ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದ ಬಳಿಕ ಸೋಮವಾರ ಅದಾನಿ ಸಮೂಹದ ಶೇರುಗಳ ಬೆಲೆಗಳು ತೀವ್ರವಾಗಿ ಕುಸಿದಿದ್ದವು. ಈ ಮೂರೂ ವಿದೇಶಿ ಫಂಡ್ಗಳು ಅದಾನಿ ಗ್ರೂಪ್ನ ನಾಲ್ಕು ಕಂಪನಿಗಳ ಒಟ್ಟು 43,000 ಕೋ.ರೂ.ಮೌಲ್ಯದ ಶೇರುಗಳನ್ನು ಹೊಂದಿವೆ. ಖಾತೆಯನ್ನು ಸ್ತಂಭನಗೊಳಿಸಿದಾಗ ಫಂಡ್ಗಳಿಗೆ ಹಾಲಿ ತಮ್ಮ ಬಳಿಯಿರುವ ಶೇರುಗಳನ್ನು ಮಾರಾಟ ಮಾಡಲು ಅಥವಾ ಹೊಸ ಶೇರುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.

ಸೋಮವಾರ ಅದಾನಿ ಗ್ರೂಪ್ ಕೂಡ ಸ್ಪಷ್ಟೀಕರಣ ನೀಡಿ ವರದಿಗಳು ತಪ್ಪು ಮಾಹಿತಿಗಳಿಂದ ಕೂಡಿವೆ ಎಂದು ತಿಳಿಸಿತ್ತಾದರೂ ಅದು ಸುಮಾರು 44,000 ಕೋ.ರೂ.ಗಳಷ್ಟು ಮಾರುಕಟ್ಟೆ ಬಂಡವಾಳೀಕರಣವನ್ನು ಕಳೆದುಕೊಂಡಿತ್ತು. ದಿನದ ವಹಿವಾಟಿನಲ್ಲಿ ದಶಕದಲ್ಲಿಯೇ ಅತ್ಯಂತ ಹೆಚ್ಚಿನ,ಶೇ.25ರಷ್ಟು ಕುಸಿತವನ್ನು ಕಂಡಿದ್ದ ಗ್ರೂಪ್ ನ ಮುಂಚೂಣಿ ಕಂಪನಿ ಅದಾನಿ ಎಂಟರ್ಪ್ರೈಸಸ್ ಶೇರುಗಳು ಬಳಿಕ ಚೇತರಿಸಿಕೊಂಡು ಶೆ.6.3ರಷ್ಟು ನಷ್ಟದೊಡನೆ ಅಂತ್ಯಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News