ಗಾಝಿಯಾಬಾದ್ ಘಟನೆ ಕುರಿತು ರಾಹುಲ್ ಗಾಂಧಿ ಸುಳ್ಳಿನ ಮೂಲಕ ವಿಷಬೀಜ ಬಿತ್ತುತ್ತಿದ್ದಾರೆ ಎಂದ ಆದಿತ್ಯನಾಥ್

Update: 2021-06-15 16:17 GMT

ಲಕ್ನೊ: ಗಾಝಿಯಾಬಾದ್‌ನಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನ ರಾಹುಲ್ ಗಾಂಧಿ ವಿರುದ್ಧ ಉತ್ತರ  ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ‘ಸುಳ್ಳಿನ’ ಮೂಲಕ ‘ವಿಷ ಬೀಜ' ಬಿತ್ತುತ್ತಿದ್ದಾರೆ  ಎಂದು ಆರೋಪಿಸಿದ ಮುಖ್ಯಮಂತ್ರಿ, ‘ಉತ್ತರ ಪ್ರದೇಶದ ಜನರನ್ನುಅವಮಾನಿಸುವುದು, ಕೆಣಕುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಜೂನ್ 5 ರಂದು ಗುಂಪೊಂದು ಅಬ್ದುಲ್ ಸಮದ್ ಅವರನ್ನು ಅಪಹರಿಸಿ ಚಾಕುವಿನಿಂದ ಬೆದರಿಕೆ ಹಾಕಿತ್ತು. ಸಮದ್  ಪಾಕಿಸ್ತಾನದ ಗೂಢಚಾರನೆಂದು ಆರೋಪಿಸಿದ್ದ ಗುಂಪಿನಲ್ಲಿದ್ದ ಒಬ್ಬಾತ  ವೃದ್ಧನ ಗಡ್ಡವನ್ನು ಕತ್ತರಿಸಿದ್ದ. ಈ ಗುಂಪು "ಜೈ ಶ್ರೀ ರಾಮ್" ಮತ್ತು "ವಂದೇ ಮಾತರಂ" ಘೋಷಣೆಗಳನ್ನು ಕೂಗುವಂತೆ ವೃದ್ಧನನ್ನು ಒತ್ತಾಯಿಸಿತ್ತು. ಸಮದ್ ಅವರು ತನ್ನ ಮೇಲೆ  ದಾಳಿ ನಡೆಸಿದವರಿಗೆ ಮನವಿ ಮಾಡುತ್ತಿರುವ ಘಟನೆಯ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗಿತ್ತು.

ಈ ಘಟನೆಯ ಕುರಿತು  ಪ್ರತಿಕ್ರಿಯಿಸಿದ ರಾಹುಲ್  ಗಾಂಧಿ, "ಶ್ರೀ ರಾಮ್ ಅವರ ನಿಜವಾದ ಭಕ್ತರು ಹೀಗೆ ಮಾಡಬಹುದೆಂದು ನಾನು ನಂಬಲು ಸಿದ್ಧನಿಲ್ಲ. ಇಂತಹ ಕ್ರೌರ್ಯ ಮಾನವೀಯತೆಯಿಂದ ದೂರವಿದೆ ಹಾಗೂ ಇದು  ಸಮಾಜ ಮತ್ತು ಧರ್ಮ ಎರಡಕ್ಕೂ ನಾಚಿಕೆಗೇಡಿನ ಸಂಗತಿ"  ಎಂದು ಟ್ವೀಟಿಸಿದ್ದರು.

" ಸತ್ಯವನ್ನು ನುಡಿ ಎನ್ನುವುದು ಭಗವಾನ್ ಶ್ರೀ ರಾಮ್ ಅವರ ಮೊದಲ ಪಾಠ. ನೀವು ಜೀವನದಲ್ಲಿ ಎಂದಿಗೂ ಸತ್ಯವನ್ನು ಮಾತನಾಡಿಲ್ಲ. ಪೊಲೀಸರು ಸತ್ಯವನ್ನು ಹೇಳಿದ ನಂತರವೂ ನೀವು ಸಮಾಜದಲ್ಲಿ ವಿಷ ಹರಡುವಲ್ಲಿ ನಿರತರಾಗಿದ್ದೀರಿ.ಇದಕ್ಕೆ  ನೀವು ನಾಚಿಕೆಪಡಬೇಕು’’ ಆದಿತ್ಯನಾಥ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News