ಉಡುಪಿ: ಕರೋನ ಅಬ್ಬರದ ಮಧ್ಯೆ ನಿಯಂತ್ರಣದಲ್ಲಿ ಮಲೇರಿಯಾ, ಡೆಂಗಿ

Update: 2021-06-15 16:31 GMT

ಉಡುಪಿ, ಜೂ.15: ಕಳೆದ 15 ತಿಂಗಳಿನಿಂದ ದೇಶಾದ್ಯಂತ ಕೊರೋನ ಅಟ್ಟಹಾಸ ಜೋರಾಗಿದ್ದು, ಜಿಲ್ಲೆಯಲ್ಲೂ ಇದು ತನ್ನ ಅಬ್ಬರವನ್ನು ಮುಂದುವರಿಸಿದೆ. ಮೇ ತಿಂಗಳಿನಲ್ಲಿ ಆರ್ಭಟಿಸಿದ ಕೊರೋನ ಎರಡನೇ ಅಲೆ ಇದೀಗ ಒಂದು ಹಂತದಲ್ಲಿ ಇಳಿಮುಖವಾಗುತ್ತಾ ಬಂದಿದ್ದು, ಈ ನಡುವೆ ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮಲೇರಿಯಾ, ಡೆಂಗಿಯಂಥ ಸಾಂಕ್ರಾಮಿಕ ರೋಗಗಳು ನಿಯಂತ್ರಣದಲ್ಲಿರುವುದು ಆರೋಗ್ಯ ಇಲಾಖೆಗೆ ಹೆಚ್ಚಿನ ನೆಮ್ಮದಿ ನೀಡಿವೆ.

ಕರಾವಳಿ ಭಾಗದಲ್ಲಿ ಮಳೆಗಾಲದ ಮೂರ್ನಾಲ್ಕು ತಿಂಗಳು ಎಡೆಬಿಡದೇ ಸುರಿಯುವ ಮಳೆಯಿಂದ ಅಲ್ಲಲ್ಲಿ ನಿಲ್ಲುವ ನೀರಿನಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, 3-4 ವರ್ಷಗಳ ಹಿಂದಿನವರೆಗೆ ಮಲೇರಿಯಾ, ಡೆಂಗಿ  ರೋಗಗಳು ಅನಿಯಂತ್ರಿತವಾಗಿ ಸಾಮಾನ್ಯ ಜನರನ್ನು ಕಾಡುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಆರೋಗ್ಯ ಇಲಾಖೆ ಯೋಜನಾಬದ್ಧವಾಗಿ ಕೈಗೊಂಡ ಹಲವು ನಿಯಂತ್ರಕ ಕ್ರಮಗಳಿಂದ ಅದೀಗ ಸಂಪೂರ್ಣ ನಿಯಂತ್ರಣಕ್ಕೆ ಬಂದಿವೆ.

ಈ ವರ್ಷದ ಜನವರಿ ತಿಂಗಳಿನಿಂದ ಮೇ 31ರವರೆಗೆ ಉಡುಪಿ ಜಿಲ್ಲೆಯಲ್ಲಿ ಮಲೇರಿಯಾದ 10, ಡೆಂಗಿನ 20 ಹಾಗೂ ಚಿಕುನ್‌ ಗುನ್ಯಾದ ಎರಡು ಪ್ರಕರಣ ಗಳು ಮಾತ್ರ ವರದಿಯಾಗಿವೆ. ಉಳಿದಂತೆ ಫೈಲೇರಿಯಾ (ಆನೆಕಾಲು ರೋಗ), ಮಿದುಳು ಜ್ವರ (ಜೆ.ಇ.) ಹಾಗೂ ಕೆಎಫ್‌ಡಿಯ ಯಾವುದೇ ಪ್ರಕರಣ ಇದುವರೆಗೆ ವರದಿಯಾಗಿಲ್ಲ. ಆದರೆ ಮಳೆಗಾಲ ಇನ್ನೂ ಪ್ರಾರಂಭದ ಹಂತದಲ್ಲಿ ರುವುದರಿಂದ ಜುಲೈ-ಆಗಸ್ಟ್-ಸೆಫ್ಟಂಬರ್ ತಿಂಗಳು, ಆರೋಗ್ಯ ಇಲಾಖೆಗೆ ಈ ಎಲ್ಲಾ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದಂತೆ ನಿಜವಾದ ಸವಾಲನ್ನು ನೀಡುವ ನಿರೀಕ್ಷೆ ಇದೆ.

ಜಿಲ್ಲೆಯಲ್ಲಿ 2021ರ ಜನವರಿ ಒಂದರಿಂದ ಮೇ 31ರವರೆಗೆ ಮಲೇರಿಯಾದ ಕೇವಲ 10, ಡೆಂಗಿ 20 ಹಾಗೂ ಚಿಕುನ್‌ ಗುನ್ಯಾದ ಎರಡು ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಉಳಿದಂತೆ ಫೈಲೇರಿಯಾ, ಮಿದುಳು ಜ್ವರ, ಕೆಎಫ್‌ಡಿಯ ಯಾವುದೇ ಪ್ರಕರಣ ವರದಿಯಾಗಿಲ್ಲ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್.

ಫೈಲೇರಿಯಾ ಪ್ರಕರಣಗಳು 2012(7) ಹಾಗೂ 2013(3)ರ ನಂತರ ಜಿಲ್ಲೆ ಯಾವ ಭಾಗದಿಂದಲೂ ವರದಿಯಾಗಿಲ್ಲ. ಅದೇ ರೀತಿ 2011ರಿಂದ 2015ರವರೆಗೆ 3ರಿಂದ 6 ಪ್ರಕರಣ ವರದಿಯಾಗುತಿದ್ದ ಚಿಕುನ್‌ ಗುನ್ಯಾ, 2016 ಮತ್ತು 2017ರಲ್ಲಿ ಒಂದೂ ಕೇಸು ಪತ್ತೆಯಾಗಿರಲಿಲ್ಲ. ಆದರೆ 2018ರಲ್ಲಿ 27, 2019ರಲ್ಲಿ 16 ಕೇಸು ಪತ್ತೆಯಾಗಿದ್ದು, ಕಳೆದ ವರ್ಷ ಈ ಸಂಖ್ಯೆ 10ಕ್ಕಿಳಿದಿತ್ತು. ಈ ವರ್ಷ ಇದುವರೆಗೆ ಎರಡು ಪ್ರಕರಣ ಮಾತ್ರ ವರದಿಯಾಗಿದ್ದು, ಮುಂದಿನ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಇದರ ಮೇಲೆ ವಿಶೇಷ ನಿಗಾ ಇರಿಸ ಬೇಕಾಗಿದೆ ಎಂದು ಡಾ. ಪ್ರಶಾಂತ್ ಭಟ್ ಹೇಳುತ್ತಾರೆ.

ಮಲೇರಿಯಾ ನಿಯಂತ್ರಣ: 2011ರಿಂದ 2016ರವರೆಗೆ ಅನಿಯಂತ್ರಿತವಾಗಿ ವ್ಯಾಪಿಸುತಿದ್ದ ಮಲೇರಿಯಾ ಸಾಂಕ್ರಾಮಿಕ ರೋಗದ ಮೇಲೆ ಇಲಾಖೆ ಶೀಘ್ರ ರೋಗ ಪತ್ತೆ ಹಾಗೂ ತ್ವರಿತ ಚಿಕಿತ್ಸೆಯಂಥ ಪರಿಣಾಮಕಾರಿ ಕ್ರಮದ ಮೂಲಕ ನಿಧಾನವಾಗಿ ರೋಗದ ಹರಡುವಿಕೆಯನ್ನು ತಹಬಂದಿಗೆ ತಂದಿತ್ತು. ಹೀಗಾಗಿ ಪ್ರಕರಣಗಳು 2011-1250, 2012-2217, 2013-2205, 2014-1639, 2015-1366, 2016-1168 ನಿಧಾನವಾಗಿ ಇಳಿಮುಖವಾಗುತ್ತಾ ಬಂದು 2017ರ ಬಳಿಕ ಮೂರಂಕಿಗೆ ಇಳಿದಿತ್ತು, ಇದರಿಂದ 2017ರಲ್ಲಿ 513, 2018- 221, 2019-150 ಹಾಗೂ 2020ರಲ್ಲಿ 124 ಪ್ರಕರಣಗಳಿದ್ದುದು ಈ ಬಾರಿ ಜನವರಿಯಿಂದ ಮೇ 31ರವರೆಗೆ ಕೇವಲ 10 ಪ್ರಕರಣಗಳು ಪತ್ತೆಯಾಗಿವೆ.

ಇನ್ನು ಡೆಂಗಿ ಪ್ರಕರಣವೂ 2011ರಲ್ಲಿ ಕೇವಲ 19 ಇದ್ದಿದ್ದು, 2012ರ ಬಳಿಕ ಏರುಗತಿಗೆ ಸಾಗಿ 2016ರಲ್ಲಿ ಒಮ್ಮೆಗೆ 600ಕ್ಕೆ ಏರಿತ್ತು. ಎಚ್ಚೆತ್ತುಕೊಂಡ ಇಲಾಖೆ ನಿಯಂತ್ರಣದ ಕ್ರಮಕ್ಕೆ ಮುಂದಾಗಿದ್ದು 2020ರಲ್ಲಿ 139 ಪ್ರಕರಣ ಮಾತ್ರ ಕಂಡುಬಂದಿತ್ತು. 2021ರಲ್ಲೂ ಮೇ 31ರವರೆಗೆ 20 ಪ್ರಕರಣ ಮಾತ್ರ ವರದಿಯಾಗಿದೆ.

ಅಲೆಮಾರಿಗಳ ಮೇಲೆ ನಿಗಾ:  ನಾಲ್ಕೈದು ವರ್ಷಗಳ ಹಿಂದಿನವರೆಗೆ ನಿರ್ಮಾಣ ಹಂತದ ಕಟ್ಟಡ ಕಾರ್ಮಿಕರು ವಾಸವಾಗಿದ್ದ, ವಲಸೆ ಕಾರ್ಮಿಕರು ವಾಸವಾಗಿದ್ದ ಸ್ಥಳಗಳು ಹಾಗೂ ಮಲ್ಪೆಯ ಬಂದರು ಪ್ರದೇಶದಲ್ಲಿ ಮಲೇರಿಯಾ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದವು. ಕಟ್ಟಡಗಳ ಮಾಲಕರು ಹಾಗೂ ಗುತ್ತಿಗೆದಾರರಿಗೆ ನೀಡಿದ ಕಟ್ಟುನಿಟ್ಟಿನ ಸೂಚನೆಗಳು, ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರ ರಕ್ತ ತಪಾಸಣೆಯನ್ನು ಹೆಚ್ಚಿಸಿ ರೋಗವನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ, ಅವರಿಗೆ ಆರೋಗ್ಯದ ಮಹತ್ವದ ಕುರಿತು ಮನದಟ್ಟು ಮಾಡಿದ ಬಳಿಕ ಇಲ್ಲೀಗ ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ಡಾ.ಭಟ್ ವಿವರಿಸಿದರು.

ಆದರೆ ಆರೋಗ್ಯ ಇಲಾಖೆಗೆ ಈಗ ತಲೆನೋವು ತರುವವರು ಅಲೆಮಾರಿ ಜನರು. ಒಂದು ಕಡೆ ಶಾಶ್ವತವಾಗಿ ನಿಲ್ಲದೇ ಸದಾ ಚಲನಶೀಲವಾಗಿರುವ ಈ ಸಮುದಾಯದ 80ರಿಂದ 100 ಮಂದಿ ಈಗ ಉಡುಪಿಯಲ್ಲಿದ್ದು, ಇವರೇ ಇಲ್ಲೀಗ ನಿಜವಾದ ರೋಗವಾಹಕವಾಗಿದ್ದಾರೆ. ನಿರ್ಜನ ಕಟ್ಟಡ, ಬಸ್‌ನಿಲ್ದಾಣ ಹೀಗೆ ಎಲ್ಲೆಂದರಲ್ಲಿ ಇರುವ ಇವರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದೇ ಅತೀ ಕಷ್ಟದ ಕೆಲಸ ಎಂದು ಡಾ.ಭಟ್ ತಿಳಿಸಿದರು.

ಕಳೆದ ವರ್ಷ ಕೆಲವರನ್ನು ಹಿಡಿದು ಪರೀಕ್ಷೆ ನಡೆಸಿದಾಗ ಇಬ್ಬರಲ್ಲಿ ಮಲೇರಿಯಾ ಪತ್ತೆಯಾಗಿತ್ತು. ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೆ ಮೂರೇ ದಿನಕ್ಕೆ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದರು. ಇದರಿಂದ ಅವರಿಂದಾಗಿ ಮುಂದಿನ ಎರಡು ತಿಂಗಳಲ್ಲಿ 96 ಕೇಸುಗಳು ಪತ್ತೆಯಾಗಿದ್ದವು. ಹೀಗಾಗಿ ಈ ಅಲೆಮಾರಿಗಳ ಮೇಲೆ ನಿಗಾ ಇರಿಸುವುದೇ ದೊಡ್ಡ ಸಮಸ್ಯೆ ಯಾಗಿದೆ ಎಂದರು.

ಮಲೇರಿಯಾ ರೋಗವನ್ನು ಬೇಗನೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಮಾತ್ರ ರೋಗವನ್ನು ನಿಯಂತ್ರಿಸಬಹುದು. ಅದಕ್ಕೆ ಆಸ್ಪತ್ರೆಗೆ ಸೇರಿಸಬೇಕಾಗಿಲ್ಲ. ನೀಡುವ ಔಷಧಿಯನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಆದರೆ ಈ ಅಲೆಮಾರಿಗಳು ಚಿಕಿತ್ಸೆ ನೀಡಲು ಕೈಗೆ ಸಿಗುವುದಿಲ್ಲ. ಹಿಡಿದು ಆಸ್ಪತ್ರೆಗೆ ಸೇರಿದರೂ ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಾರೆ ಎಂದರು.

ಈ ಬಾರಿ ಉಡುಪಿಯಲ್ಲಿ ಪತ್ತೆಯಾಗಿರುವ 10 ಪ್ರಕರಣಗಳಲ್ಲಿ ಎಂಟು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ, 1 ಮುದರಂಗಡಿ ಹಾಗೂ ಒಂದು ಸಾಸ್ತಾನದಲ್ಲಿ. ಉಡುಪಿ ನಗರದಲ್ಲೂ ಶಿರಿಬೀಡು, ವಳಕಾಡು, ತೆಂಕಪೇಟೆ, ಮಣಿಪಾಲ, ಇಂದ್ರಾಳಿ, ಗುಂಡಿಬೈಲುಗಳಲ್ಲಿ ಪ್ರಕರಣ ಪತ್ತೆಯಾಗಿವೆ.

ಡೆಂಗಿ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು. ಈ ಬಾರಿ ಜನವರಿ ತಿಂಗಳಲ್ಲಿ 648 ಮಂದಿಯ ಪರೀಕ್ಷೆ ನಡೆಸಿ ಎರಡು ಪ್ರಕರಣ ಪತ್ತೆಯಾದರೆ ಫೆಬ್ರವರಿಯಲ್ಲಿ 958(5), ಮಾರ್ಚ್ 637(6), ಎಪ್ರಿಲ್‌ನಲ್ಲಿ 546(4) ಪ್ರಕರಣ ಪತ್ತೆಯಾಗಿವೆ. ಮೇ ತಿಂಗಳಲ್ಲಿ 3 ಪ್ರಕರಣಗಳು ಕಂಡುಬಂದಿವೆ. ಉಡುಪಿ-ಕಾಪು ತಾಲೂಕಿನಲ್ಲಿ 13, ಕಾರ್ಕಳ ತಾಲೂಕಿನಲ್ಲಿ 5 ಹಾಗೂ ಕುಂದಾಪುರ ತಾಲೂಕಿನಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ.

ಮಲೇರಿಯಾ ನಿಯಂತ್ರಣಕ್ಕೆ ಕೃಷ್ಣಮಠದ ನೆರವು

ಮಲೇರಿಯಾ ರೋಗದ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆ ಕಾರ್ಯಕರ್ತರ ಕೈಗೆ ಸಿಗದಂತೆ ನುಣುಚಿಕೊಳ್ಳುತಿದ್ದ ಅಲೆಮಾರಿ ಸಮುದಾಯ ದವರಿಗೆ ಕಳೆದ ವರ್ಷ ಕೊರೋನ ಲಾಕ್‌ಡೌನ್ ಸಮಯಲ್ಲಿ ಶ್ರೀಕೃಷ್ಣ ಮಠದ ಪರ್ಯಾಯ ಅದಮಾರು ಶ್ರೀಗಳ ಸಹಕಾರದಿಂದ ಚಿಕಿತ್ಸೆ ನೀಡಿ ರೋಗವನ್ನು ನಿಯಂತ್ರಿಸಲು ಯಶಸ್ವಿಯಾಗಿದ್ದೆವು ಎಂದು ಡಾ.ಪ್ರಶಾಂತ್ ಭಟ್ ತಿಳಿಸಿದರು.

ಲಾಕ್‌ಡೌನ್ ಸಮಯದಲ್ಲಿ ಮಠದ ಮೂಲಕ ಪ್ರತಿದಿನ ಬೆಳಗ್ಗೆ ಉಚಿತವಾಗಿ ಉಪಹಾರ ನೀಡುವುದಾಗಿ ಪ್ರಕಟಿಸಿದ್ದು, ಅಲ್ಲಿಗೆ ಅಲೆಮಾರಿಗಳು ಬರುವಂತೆ ಮಾಡಲಾಗಿತ್ತು. ಜಿಲ್ಲಾಡಳಿತ ಒದಗಿಸಿದ ಉಪಹಾರವನ್ನು ಪ್ರತಿದಿನ ನೀಡುವ ಮುನ್ನ ಅವರೆಲ್ಲರನ್ನೂ ಪರೀಕ್ಷೆಗೊಳಪಡಿಸಿ ಕಡ್ಡಾಯವಾಗಿ ಔಷಧ ಸೇವಿಸುವಂತೆ ಮಾಡಲಾಗಿತ್ತು. ಇದರಿಂದ ಕಳೆದ ವರ್ಷ ರೋಗವನ್ನು ನಿಯಂತ್ರಿಸಲಾಗಿತ್ತು ಎಂದು ಡಾ.ಭಟ್ ವಿವರಿಸಿದರು.

Writer - ಬಿ.ಬಿ.ಶೆಟ್ಟಿಗಾರ್

contributor

Editor - ಬಿ.ಬಿ.ಶೆಟ್ಟಿಗಾರ್

contributor

Similar News