ಕೇರಳ ಬಿಜೆಪಿಯ ಹವಾಲಾ ಕುರಿತ ವರದಿ ಅಸ್ತಿತ್ವವನ್ನು ದೃಢಪಡಿಸಿದ ನಿವೃತ್ತ ಐಎಎಸ್ ಅಧಿಕಾರಿ

Update: 2021-06-15 16:43 GMT
ಫೋಟೊ ಕೃಪೆ : (Wikipedia) 

ಹೊಸದಿಲ್ಲಿ, ಜೂ. 15: ಹವಾಲಾ ಆರೋಪದ ಸುಳಿಯಲ್ಲಿ ಸಿಲುಕಿರುವ ಕೇರಳ ಬಿಜೆಪಿ ಕುರಿತ ವರದಿಯನ್ನು ಸಕ್ಷಮ ಪ್ರಾಧಿಕಾರದ ಮುಂದೆ ಸಲ್ಲಿಸಲಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಆನಂದ ಬೋಸ್ ತಿಳಿಸಿದ್ದಾರೆ. ಈ ಆರೋಪವನ್ನು ಬಿಜೆಪಿ ನಿರಾಕರಿಸಿದ ದಿನದ ಬಳಿಕ ವರದಿ ಅಸ್ತಿತ್ವವನ್ನು ಬೋಸ್ ಅವರು ದೃಢಪಡಿಸಿದ್ದಾರೆ. 

‘‘ಬಿಜೆಪಿ ವರದಿ ಕೇಳಿಲ್ಲ. ವರದಿ ಕೋರಿದ ಸಕ್ಷಮ ಪ್ರಾಧಿಕಾರದ ಮುಂದೆ ನನ್ನ ನಿಲುವನ್ನು ತಿಳಿಸಿದ್ದೇನೆ’’ ಎಂದು ಬೋಸ್ ಅವರು ತಿಳಿಸಿದ್ದಾರೆ. ಚುನಾವಣೆಗೆ ಮುನ್ನ ಕೇಂದ್ರ ಬಿಜೆಪಿ ರಾಜ್ಯ ಬಿಜೆಪಿ ಘಟಕಕ್ಕೆ ಹಣ ಕಳುಹಿಸಿರುವ ಕುರಿತು ಹಲವು ನಾಯಕರು ಹಾಗೂ ಅಭ್ಯರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ ಬಳಿಕ ಮಾಜಿ ಅಧಿಕಾರಿಗಳಾದ ಬೋಸ್, ಜಾಕೂಬ್ ಥಾಮಸ್ ಹಾಗೂ ಇ. ಶ್ರೀಧರನ್ ಅವರಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು ಎಂದು ಜೂನ್ 7ರಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. ಆದರೆ, ಇದು ಸುಳ್ಳು. ಅಂತಹ ಯಾವುದೇ ವರದಿ ಅಸ್ತಿತ್ವದಲ್ಲಿ ಇಲ್ಲ ಎಂದು ಕೇರಳ ಬಿಜೆಪಿಯ ಕೆ. ಸುರೇಂದ್ರನ್ ಮತ್ತೆ ಮತ್ತೆ ಹೇಳುತ್ತಿದ್ದಾರೆ. 

ಕೇರಳದಲ್ಲಿ ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಯನ್ನು ಪುನರ್ ಪರಿಶೀಲಿಸಲು ಕೇಂದ್ರದ ಬಿಜೆಪಿ ತಂಡವೊಂದನ್ನು ನಿಯೋಜಿಸಿರುವ ಬಗ್ಗೆ ನಿರ್ದಿಷ್ಟ ವರದಿ ಹಾಗೂ ವ್ಯಕ್ತಿಗಳ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಅಂತಹ ಯಾವುದೇ ತಂಡವನ್ನು ನಾವು ನಿಯೋಜಿಸಿಲ್ಲ ಎಂದು ಹೇಳಲು ಬಯಸುತ್ತೇವೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೋಮವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು. ಆದರೆ, ಅಧಿಕಾರ ಹೊಂದಿದ ವ್ಯಕ್ತಿಯೋರ್ವರು ವರದಿ ಕೋರಿದ್ದರು ಹಾಗೂ ತಾನು ಅದನ್ನು ಅವರಿಗೆ ನೀಡಿದ್ದೇನೆ ಎಂದು ಬೋಸ್ ದೃಢಪಡಿಸಿದ್ದಾರೆ. ಕೇರಳದಲ್ಲಿ ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಬೋಸ್ ಪ್ರಧಾನಿ ಮೋದಿ ಅವರಿಗೆ ವರದಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News