ಪೌರತ್ವದ ಕುರಿತು ತಪ್ಪು ಮಾಹಿತಿ ಪ್ರಸಾರ: ಸುವೇಂದು ಅಧಿಕಾರಿ ವಿರುದ್ಧ ನೋಟಿಸ್ ಜಾರಿ

Update: 2021-06-15 17:09 GMT

ಕೋಲ್ಕತಾ, ಜೂ.15: ತನ್ನ ಪೌರತ್ವ ಸ್ಥಾನಮಾನದ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡಿರುವುದಕ್ಕಾಗಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿಗೆ ಲೀಗಲ್ ನೋಟಿಸ್ ರವಾನಿಸಲಾಗಿದೆ ಎಂದು ಟಿಎಂಸಿ ಯುವವಿಭಾಗದ ಮಾಜಿ ಪ್ರಧಾನ ಕಾರ್ಯದರ್ಶಿ ವಿನಯ್ ಮಿಶ್ರಾ ಹೇಳಿದ್ದಾರೆ. ಜಾನುವಾರು ಮತ್ತು ಕಲ್ಲಿದ್ದಲು ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಮಿಶ್ರಾ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ. 

ಜೂನ್ 11ರಂದು ಟ್ವೀಟ್ ಮಾಡಿದ್ದ ಸುವೇಂದು ಅಧಿಕಾರಿ ‘2020ರಲ್ಲಿ ಮಿಶ್ರಾರನ್ನು ಯುವವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದಾಗ ಅವರು ಭಾರತದ ಪೌರರಾಗಿರಲಿಲ್ಲ. ಅವರು 2018ರಲ್ಲಿ ದಕ್ಷಿಣ ಪೆಸಿಫಿಕ್ನ ದ್ವೀಪರಾಷ್ಟ್ರ ವನೌತುವಿನ ಪೌರತ್ವ ಪಡೆದಿದ್ದರು’ ಎಂದಿದ್ದರು. ಭಾರತದ ಪೌರತ್ವ ತ್ಯಜಿಸಿ ವನೌತುವಿನ ಪೌರತ್ವ ಪಡೆದಿದ್ದ ಮಿಶ್ರಾರನ್ನು 2020ರಲ್ಲಿ ಟಿಎಂಸಿ ಯುವವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. 

ವಿದೇಶಿ ಪ್ರಜೆಯೊಬ್ಬ ಭಾರತದ ರಾಜಕೀಯ ಪಕ್ಷದ ಭಾಗವಾಗಿರಲು ಭಾರತದ ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು ಎಂದು ಅಧಿಕಾರಿ ಮತ್ತೊಂದು ಟ್ವೀಟ್ ಮಾಡಿದ್ದರು. ಆದರೆ ತಾನು ಭಾರತದ ಪಾಸ್ಪೋರ್ಟ್ ಅನ್ನು ಒಪ್ಪಿಸುವ ಮೊದಲು ತನ್ನನ್ನು ಟಿಎಂಸಿ ಯುವವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಸಿಬಿಐ ತನಿಖೆ ಆರಂಭಿಸುವ ಮೊದಲೇ, 2020ರ ಸೆಪ್ಟಂಬರ್ನಲ್ಲಿ ತಾನು ಭಾರತ ಬಿಟ್ಟಿದ್ದೇನೆ ಎಂದು ಹೇಳಿರುವ ಮಿಶ್ರಾ, ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗೆ ಲೀಗಲ್ ನೋಟಿಸ್ ರವಾನಿಸಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News