ವೃದ್ಧನ ಮೇಲೆ ಹಲ್ಲೆ ಪ್ರಕರಣ: ಟ್ವಿಟರ್, ಪತ್ರಕರ್ತರ ವಿರುದ್ಧ ಉತ್ತರ ಪ್ರದೇಶ ಪೊಲೀಸರಿಂದ ಎಫ್‍ಐಆರ್

Update: 2021-06-16 17:25 GMT

ಹೊಸದಿಲ್ಲಿ,ಜೂ.16: ಭಾರತದಲ್ಲಿ ಮಧ್ಯವರ್ತಿ ವೇದಿಕೆಯಾಗಿ ತನ್ನ ಸ್ಥಾನಮಾನವನ್ನು ಕಳೆದುಕೊಂಡ ಬಳಿಕ ಮೈಕ್ರೊಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ಸರಕಾರದ ನೂತನ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳನ್ನು ಪಾಲಿಸಲು ತಾನು ಪ್ರತಿಯೊಂದೂ ಪ್ರಯತ್ನ ಮಾಡುವುದನ್ನು ಮುಂದುವರಿಸುವುದಾಗಿ ಬುಧವಾರ ಹೇಳಿದೆ. ತನ್ಮಧ್ಯೆ ಕಾನೂನಾತ್ಮಕ ರಕ್ಷಣೆಯನ್ನು ಕಳೆದುಕೊಂಡಿರುವ ಟ್ವಿಟರ್ ವಿರುದ್ಧ ಕೋಮುಭಾವನೆಯನ್ನು ಪ್ರಚೋದಿಸಿದ ಆರೋಪದಲ್ಲಿ ಮೊದಲ ಕ್ರಿಮಿನಲ್ ಪ್ರಕರಣ ಉತ್ತರ ಪ್ರದೇಶದಲ್ಲಿ ದಾಖಲಾಗಿದೆ.


ತಾನು ಕೈಗೊಳ್ಳುವ ಪ್ರತಿಯೊಂದೂ ಕ್ರಮದ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡುವುದಾಗಿ ತಿಳಿಸಿರುವ ಟ್ವಿಟರ್, ಮಧ್ಯಂತರ ಮುಖ್ಯ ಪಾಲನಾ ಅಧಿಕಾರಿಯನ್ನು ನೇಮಕಗೊಳಿಸಲಾಗಿದ್ದು,ಶೀಘ್ರವೇ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ವಿವರಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದೆ. ನೂತನ ನಿಯಮಗಳನ್ನು ಪಾಲಿಸಲು ಟ್ವಿಟರ್ ಪ್ರತಿಯೊಂದೂ ಪ್ರಯತ್ನವನ್ನು ಮಾಡಲಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದರು.
 
ಇದಕ್ಕೂ ಮುನ್ನ ಟ್ವಿಟರ್ ನೂತನ ಐಟಿ ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಭಾರತದಲ್ಲಿ ಮಧ್ಯವರ್ತಿ ವೇದಿಕೆಯಾಗಿ ತನ್ನ ಸ್ಥಾನಮಾನವನ್ನು ಕಳೆದುಕೊಂಡಿದೆ ಎಂದು ಸರಕಾರಿ ಮೂಲಗಳು ತಿಳಿಸಿದ್ದವು. ಟ್ವಿಟರ್ ಈಗ ಕೇವಲ ವಿವಿಧ ಬಳಕೆದಾರರಿಂದ ಕಂಟೆಂಟ್ಗಳ ಪೋಸ್ಟ್ಗೆ ಅವಕಾಶ ನೀಡುವ ವೇದಿಕೆಯಾಗಿ ಉಳಿದಿಲ್ಲ,ಬದಲಿಗೆ ಅದು ತನ್ನ ವೇದಿಕೆಯಲ್ಲಿ ಪ್ರಕಟಿಸುವ ವಿಷಯಗಳಿಗಾಗಿ ನೇರವಾಗಿ ಹೊಣೆಗಾರನಾಗಿರುತ್ತದೆ ಮತ್ತು ತನ್ನ ವಿರುದ್ಧ ಕಾನೂನು ಕ್ರಮಗಳಿಗೆ ತೆರೆದುಕೊಳ್ಳುತ್ತದೆ. ಈ ಬೆಳವಣಿಗೆಯ ಪರಿಣಾಮವಾಗಿ ಕಾನೂನುಬಾಹಿರ ವಿಷಯಗಳಿಗಾಗಿ ಟ್ವಿಟರ್ ವಿರುದ್ಧ ಯಾವುದೇ ಆರೋಪವಿದ್ದರೆ ಅದನ್ನು ಪ್ರಕಾಶಕನನ್ನಾಗಿ ಪರಿಗಣಿಸಲಾಗುತ್ತದೆಯೇ ಹೊರತು ಮಧ್ಯವರ್ತಿ ವೇದಿಕೆಯಾಗಿ ಅಲ್ಲ ಮತ್ತು ಐಟಿ ಕಾಯ್ದೆ ಸೇರಿದಂತೆ ಯಾವುದೇ ಕಾಯ್ದೆಯಡಿ ದಂಡನೆಗೆ ಗುರಿಯಾಗಬೇಕಾಗುತ್ತದೆ.


ಟ್ವಿಟರ್ ಹೊರತುಪಡಿಸಿ ಮುಖ್ಯವಾಹಿನಿಯ ಇತರ ಎಲ್ಲ ಸಾಮಾಜಿಕ ಜಾಲತಾಣಗಳು ನೂತನ ನಿಯಮಗಳನ್ನು ಪಾಲಿಸುತ್ತಿವೆ ಎಂದು ಮೂಲಗಳು ತಿಳಿಸಿದವು.


ನೂತನ ಐಟಿ ನಿಯಮಗಳ ಪಾಲನೆಗಾಗಿ ತಾನು ಟ್ವಿಟರ್ಗೆ ಅಂತಿಮ ನೋಟಿಸನ್ನು ನೀಡಿರುವುದಾಗಿ ಕೇಂದ್ರ ವಿದುನ್ಮಾನ ಮತ್ತು ಮಾಹಿತಿ ಸಚಿವಾಲಯವು ಜೂ.5ರಂದು ತಿಳಿಸಿತ್ತು.


 ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸಂಬಂಧಿಸಿದ ನೂತನ ನಿಯಮಗಳನ್ನು ಪಾಲಿಸಲು ತಾನು ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಮತ್ತು ಗುತ್ತಿಗೆಯಾಧಾರದಲ್ಲಿ ನೋಡಲ್ ವ್ಯಕ್ತಿ (ಎನ್ಸಿಪಿ)ಯನ್ನು ಮತ್ತು ನಿವಾಸಿ ಕುಂದುಕೊರತೆಗಳ ಅಧಿಕಾರಿಯನ್ನು ನೇಮಿಸಲಾಗಿದೆ. ಮುಖ್ಯ ಪಾಲನಾ ಅಧಿಕಾರಿಯ ನೇಮಕವನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಟ್ವಿಟರ್ ಜೂ.9ರಂದು ಸರಕಾರಕ್ಕೆ ಬರೆದಿತ್ತು.
ಟ್ವಿಟರ್ ಉದ್ದೇಶಪೂರ್ವಕ ನಿಯಮಗಳನ್ನು ಪಾಲಿಸಿರಲಿಲ್ಲ:ರವಿಶಂಕರ ಪ್ರಸಾದ ನೂತನ ನಿಯಮಗಳನ್ನು ಪಾಲಿಸಲು ಟ್ವಿಟರ್ಗೆ ಹಲವಾರು ಅವಕಾಶಗಳನ್ನು ನೀಡಲಾಗಿತ್ತು,ಆದರೆ ಅದು ಉದ್ದೇಶಪೂರ್ವಕವಾಗಿ ನಿಯಮಗಳನ್ನು ಪಾಲಿಸದಿರಲು ಆಯ್ಕೆ ಮಾಡಿಕೊಂಡಿತ್ತು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ ಅವರು ಬುಧವಾರ ಟ್ವಿಟರ್ ಮತ್ತು ಅದರ ಭಾರತೀಯ ಪ್ರತಿಸ್ಪರ್ಧಿ ‘ಕೂ’ದಲ್ಲಿಯ ಪೋಸ್ಟ್ಗಳಲ್ಲಿ ತಿಳಿಸಿದ್ದಾರೆ.
ಟ್ವಿಟರ್ ಕಾನೂನಾತ್ಮಕ ರಕ್ಷಣೆಯನ್ನು ಕಳೆದುಕೊಂಡಿದೆ ಎಂದು ಪ್ರಸಾದ ನೇರವಾಗಿ ಹೇಳಿಲ್ಲವಾದರೂ ‘ಟ್ವಿಟರ್ ಮಧ್ಯವರ್ತಿ ವೇದಿಕೆಯಾಗುಳಿದಿಲ್ಲ ’ಎಂಬ ಶೀರ್ಷಿಕೆಯ ಮಾಧ್ಯಮ ವರದಿಯನ್ನು ಶೇರ್ ಮಾಡಿದ್ದಾರೆ.


ಪ್ರಕರಣ ದಾಖಲು

ಥರ್ಡ್ ಪಾರ್ಟಿ ಕಂಟೆಂಟ್ಗಾಗಿ ಟ್ವಿಟರ್ ಆರೋಪಗಳನ್ನು ಎದುರಿಸಬಹುದಾದ ಮೊದಲ ಪ್ರಕರಣವು ಉತ್ತರ ಪ್ರದೇಶದಲ್ಲಿ ಮಂಗಳವಾರ ರಾತ್ರಿ ದಾಖಲಾಗಿದ್ದು,ಇದು ಜೂ.5ರಂದು ಘಾಝಿಯಾಬಾದ್ನಲ್ಲಿ ಮುಸ್ಲಿಂ ವೃದ್ಧರೋರ್ವರ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದೆ. ಘಟನೆಗೆ ಸಂಬಂಧಿಸಿದ ತಪ್ಪುಮಾಹಿತಿಯನ್ನು ತೆಗೆಯದಿದ್ದಕ್ಕಾಗಿ ಟ್ವಿಟರ್ನ್ನು ಎಫ್ಐಆರ್ನಲ್ಲಿ ಆರೋಪಿಯನ್ನಾಗಿಸಲಾಗಿದೆ.
ತನ್ನ ಮೇಲೆ ಹಲ್ಲೆ ನಡೆಸಿದ್ದ ಗುಂಪು ತನ್ನ ಗಡ್ಡವನ್ನು ಕತ್ತರಿಸಿತ್ತು ಮತ್ತು ವಂದೇ ಮಾತರಂ ಹಾಗೂ ಜೈಶ್ರೀರಾಮ್ ಎಂದು ಕೂಗುವಂತೆ ತನ್ನನ್ನು ಬಲಾತ್ಕರಿಸಿತ್ತು ಎಂದು ಸೂಫಿ ಅಬ್ದುಲ್ ಸಮದ್ ಆರೋಪಿಸಿದ್ದು,ಇದನ್ನು ತಳ್ಳಿಹಾಕಿರುವ ಉ.ಪ್ರದೇಶ ಪೊಲೀಸರು ಟ್ವೀಟ್ಗಳಲ್ಲಿ ಬಣ್ಣಿಸಿರುವಂತೆ ಇದು ಕೋಮುಘಟನೆಯಾಗಿರಲಿಲ್ಲ ಎಂದಿದ್ದಾರೆ.
ಹಿಂದುಗಳು ಮತ್ತು ಮುಸ್ಲಿಮರು ಸೇರಿದಂತೆ ಆರು ಜನರ ಗುಂಪು ಸಮದ್ ಮೇಲೆ ಹಲ್ಲೆ ನಡೆಸಿದ್ದು,ಅವರೆಲ್ಲ ನಕಲಿ ತಾಯಿತಗಳನ್ನು ಮಾರುತ್ತಿದ್ದಕ್ಕಾಗಿ ಸಮದ್ ವಿರುದ್ಧ ಆಕ್ರೋಶಗೊಂಡಿದ್ದರು. ಕೋಮು ಭಾವನೆಯನ್ನು ಪ್ರಚೋದಿಸುವ ಸ್ಪಷ್ಟ ಉದ್ದೇಶದೊಂದಿಗೆ ಸಮದ್ ಆರೋಪಗಳನ್ನು ಶೇರ್ ಮಾಡಿಕೊಂಡಿದ್ದಕ್ಕಾಗಿ ಟ್ವಿಟರ್,ಹಲವಾರು ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರನ್ನು ಎಫ್ಐಆರ್ನಲ್ಲಿ ಹೆಸರಿಸಲಾಗಿದೆ.
ಪೊಲೀಸರ ಹೇಳಿಕೆಯನ್ನು ತಿರಸ್ಕರಿಸಿರುವ ಸಮದ್ ಕುಟುಂಬವು ದ್ವೇಷ ಹಲ್ಲೆ ಸೇರಿದಂತೆ ನಾಲ್ಕು ಗಂಟೆಗಳ ಕಾಲ ಅವರನ್ನು ಹಿಂಸಿಸಲಾಗಿತ್ತು ಎಂದು ಆರೋಪಿಸಿದೆ. ನಮ್ಮ ಕುಟುಂಬದಲ್ಲಿ ಯಾರೂ ತಾಯಿತಗಳನ್ನು ಮಾರುವ ದಂಧೆಯನ್ನು ಮಾಡುತ್ತಿಲ್ಲ. ನಾವು ಬಡಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಮದ್ ಪುತ್ರ ತಿಳಿಸಿದರು.
ಸರಕಾರಕ್ಕೆ ಅಧಿಕಾರವಿಲ್ಲ
ನಿಯಮಗಳ ಪಾಲನೆಯಲ್ಲಿ ವೈಫಲ್ಯಕ್ಕಾಗಿ ಟ್ವಿಟರ್ನಂತಹ ಕಂಪನಿಗಳು ಮಧ್ಯವರ್ತಿ ವೇದಿಕೆಗಳಾಗಿ ಉಳಿಯಬೇಕೇ ಎನ್ನುವುದನ್ನು ನಿರ್ಧರಿಸುವುದು ನ್ಯಾಯಾಲಯಗಳ ಕೆಲಸವಾಗಿದೆಯೇ ಹೊರತು ಸರಕಾರದ್ದಲ್ಲ ಎಂದು ಡಿಜಿಟಲ್ ವಕಾಲತ್ತು ಗುಂಪು ಇಂಟರನೆಟ್ ಫ್ರೀಡಂ ಫೌಂಡೇಷನ್ ಹೇಳಿದೆ.a

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News