ಅಯೋಧ್ಯೆ ಭೂಮಿ ಖರೀದಿಯಲ್ಲಿ ಭ್ರಷ್ಟಾಚಾರ ಬಹಿರಂಗಪಡಿಸಿದ್ದಕ್ಕೆ ಬಿಜೆಪಿ ಬೆಂಬಲಿಗರಿಂದ ಮನೆ ಮೇಲೆ ದಾಳಿ: ಸಂಜಯ್ ಸಿಂಗ್

Update: 2021-06-16 07:41 GMT

ಹೊಸದಿಲ್ಲಿ: ರಾಮ ದೇವಾಲಯದ ಟ್ರಸ್ಟ್ ಅಯೋಧ್ಯೆಯಲ್ಲಿ  ಭೂಮಿ  ಖರೀದಿಯ ವೇಳೆ ಭ್ರಷ್ಟಾಚಾರ  ನಡೆದಿದೆ ಎಂದು ಎತ್ತಿ ತೋರಿಸಿದ್ದಕ್ಕಾಗಿ ಬಿಜೆಪಿ ಬೆಂಬಲಿಗರು ತಮ್ಮ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ  ಸಂಸದ ಸಂಜಯ್ ಸಿಂಗ್ ಮಂಗಳವಾರ ಹೇಳಿದ್ದಾರೆ.

ಹೆಚ್ಚಿನ ಭದ್ರತೆಯ ಪ್ರದೇಶವಾದ ನಾರ್ತ್ ಅವೆನ್ಯೂ ಪ್ರದೇಶದ ಸಂಜಯ್ ಸಿಂಗ್ ಅವರ ಮನೆಯ ನಾಮ ಫಲಕಕ್ಕೆ  ಇಬ್ಬರು ಮಸಿ ಬಳಿದಿದ್ದಾರೆ ಹಾಗೂ  ಅವರು ಬಲವಂತವಾಗಿ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು ಎಂದು ಆಮ್ ಆದ್ಮಿ ಪಕ್ಷ(ಎಎಪಿ)ಮೂಲಗಳು ತಿಳಿಸಿವೆ.

ಘಟನೆಗೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಹಾಗೂ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 "ನನ್ನ ಮನೆಯ ಮೇಲೆ ದಾಳಿ ನಡೆಸಲಾಗಿದೆ.  ಬಿಜೆಪಿ ಬೆಂಬಲಿಗರೇ  ಎಚ್ಚರಿಕೆಯಿಂದ ಆಲಿಸಿ, ನೀವು ಎಷ್ಟೇ ಗೂಂಡಾಗಿರಿ ಮಾಡಿದರೂ, ನನ್ನನ್ನು ಕೊಂದರೂ ರಾಮ  ಮಂದಿರ  ನಿರ್ಮಿಸಲು ಸಂಗ್ರಹಿಸಿದ ಹಣವನ್ನು ಕದಿಯಲು ನಾನು  ಬಿಡುವುದಿಲ್ಲ’’ಎಂದು ಸಂಜಯ್ ಸಿಂಗ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸಂಜಯ್ ಸಿಂಗ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ದಿಲ್ಲಿ  ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಅವರು "ನಿನ್ನೆ ಅವರು ರಾಮ್ ಮಂದಿರ ನಿರ್ಮಾಣವನ್ನು ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸಿದರು. ಇಂದು ತನ್ನ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಎಲ್ಲವೂ ನಾಟಕ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News