ಸುರಕ್ಷಿತ ತಾಣ ಸ್ಥಾನಮಾನ ಕಳೆದುಕೊಂಡ ಟ್ವಿಟ್ಟರ್ : ಹೊಸ ಐಟಿ ನಿಯಮಗಳಂತೆ ಅಧಿಕಾರಿಯನ್ನು ನೇಮಿಸಲು ಸಂಸ್ಥೆ ವಿಫಲ

Update: 2021-06-16 07:33 GMT

ಹೊಸದಿಲ್ಲಿ :  ಭಾರತದ ಹೊಸ ಐಟಿ ನಿಯಮಗಳಿಗನುಸಾರವಾಗಿ ಟ್ವಿಟ್ಟರ್  ಸ್ಟೆಟ್ಯೂಟರಿ ಅಧಿಕಾರಿಗಳನ್ನು ನೇಮಕಗೊಳಿಸಲು ವಿಫಲವಾಗಿರುವುದರಿಂದ  ಯಾವುದೇ ಬಳಕೆದಾರ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಬಹುದಾದ ʼಕಾನೂನುಬಾಹಿರ' ಮತ್ತು ʼಪ್ರಚೋದನಕಾರಿʼ ಕಂಟೆಂಟ್‍ಗೆ ಕಂಪೆನಿಯ ಭಾರತದ ಆಡಳಿತ ನಿರ್ದೇಶಕರು ಸಹಿತ ಇತರ ಉನ್ನತ ಅಧಿಕಾರಿಗಳು ಪೊಲೀಸ್ ವಿಚಾರಣೆ ಸಹಿತ ಐಪಿಸಿ ಅನ್ವಯ  ಕ್ರಿಮಿನಲ್ ಪ್ರಕರಣ ಕೂಡ ಎದುರಿಸಬೇಕಾಗಿದೆ.

ಇದರೊಂದಿಗೆ  ಐಟಿ ಕಾಯಿದೆಯ ಸೆಕ್ಷನ್ 79 ಅನ್ವಯ ರಕ್ಷಾ ಕವಚವನ್ನು ಭಾರತದಲ್ಲಿ ಕಳೆದುಕೊಂಡ ಅಮೆರಿಕಾದ ಏಕೈಕ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಆಗಿದೆ.  ಗೂಗಲ್, ಯುಟ್ಯೂಬ್, ಫೇಸ್ ಬುಕ್, ವಾಟ್ಸ್ಯಾಪ್ ಮತ್ತು ಇನ್‍ಸ್ಟಾಗ್ರಾಂ ವೇದಿಕೆಗಳಿಗೆ ಈಗಲೂ ಸೆಕ್ಷನ್ 79 ಅನ್ವಯ ರಕ್ಷಾ ಕವಚವಿದೆ.

"ಮಾರ್ಗಸೂಚಿಗಳ ಪಾಲನೆಗೆ ಟ್ವಿಟ್ಟರ್‍ಗೆ ಹೆಚ್ಚುವರಿ ಸಮಯ ಒದಗಿಸಲಾಗಿತ್ತು, ಆದರೂ ಅದು ನಿಯಮ ಪಾಲನೆಗೆ ಮುಂದಾಗಿಲ್ಲ, ಆದುದರಿಂದ ಟ್ವಿಟ್ಟರ್ ಸುರಕ್ಷಿತ ತಾಣ ರಕ್ಷಣೆಯನ್ನು ಕಳೆದುಕೊಂಡಿದೆ ಹಾಗೂ ಥರ್ಡ್ ಪಾರ್ಟಿ ಕಂಟೆಂಟ್‍ಗೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ" ಎಂದು ಸರಕಾರಿ ಮೂಲಗಳು ತಿಳಿಸಿವೆ.

ಭಾರತ ಸರಕಾರದ ಸೂಚನೆಯಂತೆ ಅಧಿಕಾರಿಗಳನ್ನು ಟ್ವಿಟ್ಟರ್ ಮೇ 25ರೊಳಗೆ ನೇಮಕ ಮಾಡಬೇಕಿತ್ತು. ಟ್ವಿಟ್ಟರ್ ಆರಂಭದಲ್ಲಿ ಕೆಲವು ನೇಮಕಾತಿಗಳನ್ನು ಮಾಡಿದ್ದರೂ ನೇಮಕಗೊಂಡವರು ಕಂಪೆನಿಯ ನೇರ ಉದ್ಯೋಗಿಗಳಾಗಿರದೇ ಇದ್ದುದರಿಂದ ಸರಕಾರ ಈ ನೇಮಕಾತಿಗಳನ್ನು ತಿರಸ್ಕರಿಸಿತ್ತು.

ಕಂಪೆನಿಯು ʼಹಂಗಾಮಿʼ ಮುಖ್ಯ ಕಂಪ್ಲಯನ್ಸ್ ಅಧಿಕಾರಿಯನ್ನು ನೇಮಕ ಮಾಡಿದೆ  ಹಾಗೂ ಈ ಮಾಹಿತಿಯನ್ನು ಸದ್ಯದಲ್ಲಿಯೇ ಐಟಿ ಸಚಿವಾಲಯದ ಜತೆ ಶೇರ್ ಮಾಡಲಾಗುವುದು ಎಂದು ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News