ನಿರ್ಗಮನ

Update: 2021-06-16 08:06 GMT
ಸಾಂದರ್ಭಿಕ ಚಿತ್ರ

ಥೋಡಾ ಸುಕೂನ್ ಭೀ ಡೂಂಢಿಯೇ ಜನಾಬ್,

ಯೇ ಝರೂರತೇ ತೋ ಕಭೀ ಖತಂ ನಹೀ ಹೋಗೀ.

ಸ್ನೇಹಿತರೊಬ್ಬರ ಮಗಳ ಮದುವೆ ಮುಂದಿನ‌ ತಿಂಗಳ ಒಂದನೇ ತಾರೀಕು. ಮದುವೆಯ ಮುನ್ನಾದಿನ‌ ಗುರುಗಳ ಫೋನ್. ಮದುವೆಗೆ ತಾನೂ ಬರುವುದಾಗಿ, ಕಲ್ಯಾಣ ಮಂಟಪದ ದಾರಿ ತಿಳಿದಿರದ ಕಾರಣ ಅವರು ಬರುವ ವೇಳೆಗೆ ನಾನು ವಿದ್ಯಾಗಿರಿ ಬಸ್ ಸ್ಟಾಂಡಿನಲ್ಲಿರಬೇಕಾಗಿಯೂ ತಿಳಿಸಿದರು.

ಮದುವೆಯ ದಿನ. ನಿಗದಿತ ಸಮಯಕ್ಕೆ ಗುರುಗಳು ವಿದ್ಯಾಗಿರಿ ತಲುಪಿದ್ದರು. ಕಾರಿನಲ್ಲಿ ಬೇರೆ ಯಾರೂ ಇರಲಿಲ್ಲ. ಹಾಲ್ ಸಮೀಪಿಸಿದೆವು. ದೊಡ್ಡವರ ಮದುವೆ. ಲೆಕ್ಕವಿಡಲು ಸಾಧ್ಯವಿಲ್ಲದಷ್ಟು ಕಾರುಗಳು ನಿಂತಿದ್ದವು. ಬಹುಶಃ ಒಬ್ಬೊಬ್ಬರು ಒಂದೊಂದು ಕಾರಿನಲ್ಲಿ ಬಂದಿರಬೇಕು. ಗಂಡ ಒಂದು ಕಾರಿನಲ್ಲಿ. ಹೆಂಡತಿ ಇನ್ನೊಂದು ಕಾರಿನಲ್ಲಿ ! ಸಾಕಷ್ಟು ಒದ್ದಾಡಿದ ನಂತರ ಕೊನೆಗೂ ಲಾಟರಿ ಹೊಡೆದಂತೆ ಸಿಕ್ಕ ಪಾರ್ಕಿಂಗಿನಲ್ಲಿ ಕಾರು ನಿಲ್ಲಿಸಿ ಹಾಲ್ ಸೇರಿದೆವು.

ವಧೂವರರನ್ನು ಹಾರೈಸಿ ಹೊರಬಂದು ನೋಡಿದರೆ ನಾವು ಬಂದು ಇಪ್ಪತ್ತು ನಿಮಿಷಗಳಾಗಿವೆ ಅಷ್ಟೆ. ಮರಳಿ ಕಾರಿನಲ್ಲಿ ಹೊರಟಂತೆ ನಾನು ಹೇಳಿದೆ: "ನಾವು ಬೇಗನೇ ಹಿಂದಿರುಗಿದ್ದು ಒಳ್ಳೆಯದಾಯ್ತು. ನಾವು ಹೊರಟ ಕಾರಣ ಯಾರಿಗೋ ಒಬ್ಬರಿಗೆ ಪಾರ್ಕಿಂಗ್ ಸಿಕ್ಕಿತು..."

"ಜೀವನವು ಹೀಗೇ... ಈ ಪಾರ್ಕಿಂಗಿನಂತೆ. ಮೊದಲು ಬಂದವರು ಅನಾವಶ್ಯಕ ಕಾಲಹರಣ ಮಾಡದೇ ಸಕಾಲದಲ್ಲಿ ಮರಳಿದರೆ ನಂತರ ಬರುವವರಿಗೆ ಅವಕಾಶ ದೊರೆಯುತ್ತದೆ.." ಉತ್ತರಿಸುತ್ತ ಗುರುಗಳು ಕಾರಿನ ಗೇರ್ ಬದಲಾಯಿಸಿದರು.

ಈಗ ಯೋಚಿಸುವ ಸರದಿ ನನ್ನದಾಗಿತ್ತು. ಹಾಗಾದರೆ ನಮ್ಮ ಕೀಯನ್ನು ತನ್ನಲ್ಲಿ ಕಾಪಿಟ್ಟುಕೊಂಡಿರುವ ಆ ಜಗನ್ನಿಯಾಮಕ ಶಕ್ತಿಯು ಬಾ ಎಂದು ಕರೆದೊಯ್ಯುವ ವರೆಗೂ ನಾವು ಪಾರ್ಕಿಂಗಿನಲ್ಲಿ ಬಾಕಿ ಉಳಿಯಬೇಕಾಗಿರುವುದು ವಿಪರ್ಯಾಸವಲ್ಲವೇ ?

ಪ್ರಶ್ನೆಗಳು ಒಂದೊಂದಾಗಿ ಕಾಡಲಾರಂಭಿಸಿದವು.

Writer - - ರಾಜೇಂದ್ರ ಪೈ

contributor

Editor - - ರಾಜೇಂದ್ರ ಪೈ

contributor

Similar News