ಕೋವಿಶೀಲ್ಡ್ ಲಸಿಕೆಯ ಡೋಸ್ ಅಂತರ ವಿವಾದ: ಆರೋಗ್ಯ ಸಚಿವರ ಸ್ಪಷ್ಟೀಕರಣ

Update: 2021-06-16 10:02 GMT

ಹೊಸದಿಲ್ಲಿ: ಕೋವಿಶೀಲ್ಡ್ ಲಸಿಕೆಯ ಡೋಸ್ ಗಳ ನಡುವಿನ ಅಂತರವನ್ನು  ಹೆಚ್ಚಿಸುವ ನಿರ್ಧಾರವು "ಪಾರದರ್ಶಕ" ವಾಗಿತ್ತು ಹಾಗೂ  "ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ" ಈ ತೀರ್ಮಾನ ಮಾಡಲಾಗಿದೆ  ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ  ವರ್ಧನ್ ಬುಧವಾರ ಟ್ವೀಟ್ ಮಾಡಿದ್ದಾರೆ.

ಕೋವಿಡ್ ಲಸಿಕೆ(ಕೋವಿಶೀಲ್ಡ್)ಡೋಸ್ ಗಳ ನಡುವೆ ಅಂತರವನ್ನು ದ್ವಿಗುಣಗೊಳಿಸುವ ಸರಕಾರದ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿರಲಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿಯ ಮೂವರು ವಿಜ್ಞಾನಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.

ಡೋಸ್ ಗಳ ನಡುವಿನ ಅಂತರವನ್ನು 6-8 ವಾರಗಳ ಬದಲಾಗಿ 12-16 ವಾರಗಳಿಗೆ ವಿಸ್ತರಿಸಲಾಗಿದೆ ಎಂದು ಮೇ 13ರಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿತ್ತು. ದೇಶಾದ್ಯಂತ ಲಸಿಕೆಗೆ ಬೇಡಿಕೆ ಹೆಚ್ಚಿ ಪೂರೈಕೆ ಕಡಿಮೆಯಾದ ಸಮಯದಲ್ಲೇ ಈ ನಿರ್ಧಾರ ಪ್ರಕಟಿಸಲಾಗಿತ್ತು.

"ಕೋವಿಶೀಲ್ಡ್  ಎರಡು ಡೋಸ್  ನೀಡುವುದರ ನಡುವಿನ ಅಂತರವನ್ನು ಹೆಚ್ಚಿಸುವ ನಿರ್ಧಾರವನ್ನು ವೈಜ್ಞಾನಿಕ ದತ್ತಾಂಶಗಳ ಆಧಾರದ ಮೇಲೆ ಪಾರದರ್ಶಕ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ. ಡೇಟಾವನ್ನು ಮೌಲ್ಯಮಾಪನ ಮಾಡಲು ಭಾರತವು ದೃಢ ವಾದ ಕಾರ್ಯವಿಧಾನವನ್ನು ಹೊಂದಿದೆ. ಅಂತಹ ಮಹತ್ವದ ವಿಷಯವನ್ನು ರಾಜಕೀಯಗೊಳಿಸುತ್ತಿರುವುದು ದುರದೃಷ್ಟಕರ!" ಎಂದು ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.

''8–12 ವಾರಗಳ ಅಂತರ ಒಪ್ಪಬಹುದು. ಆದರೆ ಸರಕಾರವು 12–16 ವಾರಗಳ ಅವಧಿ ನಿಗದಿಪಡಿಸಿದೆ. ಇದರಿಂದ ಒಳಿತಾಗಲೂಬಹುದು, ಆಗದೆಯೂ ಇರಬಹುದು. ನಮ್ಮ ಲ್ಲಿ ಆ ಬಗ್ಗೆ ಮಾಹಿತಿ ಇಲ್ಲ'' ಎಂದು ಸಾಂಕ್ರಾಮಿಕ ಸೋಂಕುಶಾಸ್ತ್ರದ ರಾಷ್ಟ್ರೀಯ ಸಂಸ್ಥೆಯ ಮಾಜಿ ನಿರ್ದೇಶಕ ಎಂಡಿ ಗುಪ್ಟೆ  ಹೇಳಿದ್ದಾರೆ.

ಇದಕ್ಕೆ ಸಮಿತಿಯ ಮತ್ತೊಬ್ಬ ಸದಸ್ಯ ಮ್ಯಾಥ್ಯೂ ವರ್ಗೀಸ್ ಸಹಮತ ವ್ಯಕ್ತಪಡಿಸಿದ್ದಾರೆ.

ನಾವು ಲಸಿಕೆಯ ಡೋಸ್ ನಡುವಣ ಅಂತರವನ್ನು 8–12 ವಾರಗಳವರೆಗೆ ವಿಸ್ತರಿಸಬಹುದು ಎಂದಷ್ಟೇ ಸರಕಾರಕ್ಕೆ ಶಿಫಾರಸು ಮಾಡಿದ್ದೆ ವು ಎಂದು ವರ್ಗೀಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News