ಕೊವ್ಯಾಕ್ಸಿನ್‍ ಲಸಿಕೆಯಲ್ಲಿ ನವಜಾತ ಕರುವಿನ ರಕ್ತಸಾರ ಬಳಕೆ ಆರೋಪ: ಸರಕಾರ ಹೇಳಿದ್ದೇನು?

Update: 2021-06-16 15:03 GMT

ಹೊಸದಿಲ್ಲಿ: ಭಾರತ್ ಬಯೋಟೆಕ್ ಸಂಸ್ಥೆಯ ಕೋವಿಡ್ ಲಸಿಕೆ ಕೊವ್ಯಾಕ್ಸಿನ್‍ನಲ್ಲಿ  ನವಜಾತ ಕರುವಿನ ಸೀರಮ್ (ರಕ್ತಸಾರ) ಇಲ್ಲ  ಹಾಗೂ ಸೀರಮ್  ಅಂತಿಮ ಲಸಿಕೆ ಉತ್ಪನ್ನದ  ಭಾಗವಾಗಿಲ್ಲ ಎಂದು ಸರಕಾರ ಇಂದು ಸ್ಪಷ್ಟ ಪಡಿಸಿದೆ. ಕೊವ್ಯಾಕ್ಸಿನ್‍ನಲ್ಲಿ ನವಜಾತ ಕರುವಿನ ಸೀರಮ್ ಇದೆ ಎಂದು ಕಾಂಗ್ರೆಸ್‌ ಮುಖಂಡರು ಸಹಿತ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಸರಕಾರದ ಸ್ಪಷ್ಟೀಕರಣ ಬಂದಿದೆ.

"ನವಜಾತ ಕರುವಿನ ಸೀರಮ್ ಅನ್ನು  ವೆರೋ ಕೋಶಗಳನ್ನು ತಯಾರುಗೊಳಿಸಲು ಹಾಗೂ ಅಭಿವೃದ್ಧಿಗೊಳಿಸಲು ಮಾತ್ರ ಬಳಸಲಾಗುತ್ತದೆ ಹಾಗೂ ಈ ವಿಧಾನವನ್ನು ಪೋಲಿಯೋ, ರೇಬೀಸ್ ಮತ್ತು ಇನ್‍ಫ್ಲೂಯೆನ್ಝಾ ಲಸಿಕೆಗಳಿಗಾಗಿಯೂ ದಶಕಗಳಿಂದ ಉಪಯೋಗಿಸಲಾಗುತ್ತಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

"ದನಗಳ ಹಾಗೂ ಇತರ ಪ್ರಾಣಿಗಳ ಸೀರಮ್ ಅನ್ನು ಜಾಗತಿಕವಾಗಿ ವೆರೋ ಕೋಶಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಈ ವೆರೋ ಕೋಶಗಳು ಲಸಿಕೆಗಳ ಉತ್ಪನ್ನಗಳಿಗೆ ಸಹಾಯಕವಾಗುತ್ತವೆ" ಎಂದು ಸಚಿವಾಲಯ ಹೇಳಿದೆ.

"ಈ ವೆರೋ ಕೋಶಗಳು ಬೆಳೆದ ನಂತರ ಅವುಗಳನ್ನು  ನೀರು ಮತ್ತು ರಾಸಾಯನಿಕಗಳಿಂದ ʼಬಫರ್' ಎಂಬ ವಿಧಾನದಿಂದ ಚೆನ್ನಾಗಿ ಹಲವು ಬಾರಿ ತೊಳೆದು ಅವುಗಳು ನವಜಾತ ಕರುವಿನ ಸೀರಮ್‍ನಿಂದ ಮುಕ್ತವಾಗುವಂತೆ ನೋಡಿಕೊಳ್ಳಲಾಗುತ್ತದೆ. ನಂತರ ಈ ಕೋಶಗಳಿಗೆ ಕೊರೋನವೈರಸ್ ಸೋಂಕು ತಗಲಿಸಲಾಗುತ್ತದೆ, ವೈರಸ್  ಬೆಳೆದಾಗ ಈ ವೆರೋ ಕೋಶಗಳು ಸಂಪೂರ್ಣ ನಾಶವಾಗುತ್ತವೆ. ನಂತರ ಬೆಳೆದ ವೈರಸ್ ಅನ್ನು ನಾಶ (ಇನ್‍ಆಕ್ಟಿವೇಟ್) ಮಾಡಲಾಗುತ್ತದೆ ಹಾಗೂ ಶುದ್ಧೀಕರಿಸಲಾಗುತ್ತದೆ. ಈ ನಾಶಗೈದ ವೈರಸ್ ಅನ್ನು ಅಂತಿಮ ಲಸಿಕೆ ತಯಾರಿಗೆ ಬಳಸಲಾಗುತ್ತದೆ" ಎಂದು ಸಚಿವಾಲಯ ತಿಳಿಸಿದ್ದು, ಕೆಲ ಸಾಮಾಜಿಕ ಜಾಲತಾಣ ಪೋಸ್ಟ್ ಗಳಲ್ಲಿ ವಾಸ್ತವವನ್ನು ತಿರುಚಲಾಗಿದೆ ಎಂದು  ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News