‘ಆಡಿಯೊ ರಾಜಕೀಯ’ಕ್ಕಾಗಿ ಉಚ್ಚಾಟಿತ ನಾಯಕಿ ಶಶಿಕಲಾರನ್ನು ತರಾಟೆಗೆತ್ತಿಕೊಂಡ ಎಐಎಡಿಎಂಕೆ

Update: 2021-06-16 14:25 GMT

ಚೆನ್ನೈ,ಜೂ.16: ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಮತ್ತು ಪಕ್ಷದ ಕೆಲವು ಸದಸ್ಯರ ನಡುವಿನ ಮಾತುಕತೆಯದ್ದು ಎಂದು ಹೇಳಲಾಗಿರುವ ಆಡಿಯೊ ಟೇಪ್ಗಳ ಬಿಡುಗಡೆಯ ನಡುವೆಯೇ ಪಕ್ಷವು,‘ಒಡೆದು ಆಳುವ ’ಉದ್ದೇಶದೊಂದಿಗೆ ಶಶಿಕಲಾ ತನ್ನ ಕಾರ್ಯಕರ್ತರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಎಂದು ಬುಧವಾರ ಆರೋಪಿಸಿದೆ.

ಶಶಿಕಲಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಐಎಡಿಎಂಕೆ ನಾಯಕ ಡಿ.ಜಯಕುಮಾರ್, ಅವರು ತನ್ನ ವೈಯಕ್ತಿಕ ಲಾಭಕ್ಕಾಗಿ ಆಡಿಯೊ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಸೋರಿಕೆಯಾಗಿರುವ ಆಡಿಯೊ ತುಣುಕುಗಳಲ್ಲಿ ‘ಪಕ್ಷವನ್ನು ಉಳಿಸುವ ಮತ್ತು ಅಮ್ಮಾ (ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ) ಆಡಳಿತವನ್ನು ಮರುಸ್ಥಾಪಿಸುವ ಹೊಣೆಗಾರಿಕೆ ನನ್ನ ಮೇಲಿದೆ. ನೀವು ನನ್ನೊಂದಿಗಿದ್ದರೆ ಪಕ್ಷವನ್ನು ಸುವ್ಯವಸ್ಥೆಗೊಳಿಸಬಲ್ಲೆ ಎಂಬ ವಿಶ್ವಾಸ ನನಗಿದೆ. ಎಐಎಡಿಎಂಕೆ 100 ವರ್ಷ ಹಳೆಯದಾದರೂ ಅದು ಶಕ್ತಿಶಾಲಿಯಾಗಿಯೇ ಇರಬೇಕು. ನಾವು ಖಂಡಿತ ಅಮ್ಮಾ ಆಡಳಿತವನ್ನು ತರುತ್ತೇವೆ ’ಎಂದು ಶಶಿಕಲಾ ಹೇಳಿದ್ದಾರೆ.

ಶಶಿಕಲಾರ ಆಡಿಯೊ ತುಣುಕುಗಳಿಗೆ ಪ್ರತಿಕ್ರಿಯಿಸಿದ ಜಯಕುಮಾರ್, ಅವರು ಪಕ್ಷದ ಪ್ರಾಥಮಿಕ ಸದಸ್ಯರೂ ಅಲ್ಲ,‌ ಹೀಗಿರುವಾಗ ಅವರು ಪಕ್ಷದ ಮೇಲೆ ಹಕ್ಕು ಸಾಧಿಸಲು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದರು. ಇಂತಹ ತಂತ್ರಗಳು ಯಶಸ್ವಿಯಾಗುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದರು.

ಈ ಮೊದಲು ಶಶಿಕಲಾ ಜೊತೆ ಮಾತನಾಡಿದವರ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದ ಎಐಎಡಿಎಂಕೆ,ಪಕ್ಷದ ವಕ್ತಾರ ವಿ.ಪುಗಳೆಂದಿ ಸೇರಿದಂತೆ 17 ಸದಸ್ಯರನ್ನು ಉಚ್ಚಾಟಿಸಿತ್ತು. ಈ ಪೈಕಿ ಹೆಚ್ಚಿನವರು ಶಶಿಕಲಾ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಒಡೆದು ಆಳುವ ನೀತಿಯ ಮೂಲಕ ಪಕ್ಷವನ್ನು ವಶಪಡಿಸಿಕೊಳ್ಳುವ ಯತ್ನಕ್ಕಾಗಿ ಶಶಿಕಲಾ ವಿರುದ್ಧ ದಾಳಿ ನಡೆಸಿದ ಜಯಕುಮಾರ್, ಅದು ಎಂದೂ ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News