ಬಿಜೆಪಿ ಕಚೇರಿಯಲ್ಲಿ ರೆಮ್‌ಡೆಸಿವಿರ್ ದಾಸ್ತಾನು: ಹೈಕೋರ್ಟ್ ನಲ್ಲಿ ಸಮರ್ಥಿಸಿದ ಬಿಜೆಪಿ ಶಾಸಕ

Update: 2021-06-16 17:11 GMT

ಅಹಮದಾಬಾದ್: ಸೂರತ್‌ನ ಪಕ್ಷದ ಕಚೇರಿಯಿಂದ ಅಗತ್ಯವಿರುವ ರೋಗಿಗಳಿಗೆ ಸಹಾನುಭೂತಿ ಮತ್ತು ಮಾನವೀಯತೆಯ ಆಧಾರದ ಮೇಲೆ ಹಲವಾರು ಜೀವಗಳನ್ನು ಉಳಿಸಬೇಕು ಎಂಬ ಕಾರಣಕ್ಕಾಗಿ ರೆಮ್‌ಡೆಸಿವಿರ್ ಬಾಟಲುಗಳನ್ನು ಲಭ್ಯವಿರಿಸಿದ್ದಾಗಿ ಬಿಜೆಪಿ ಶಾಸಕರೊಬ್ಬರು ಗುಜರಾತ್ ಹೈಕೋರ್ಟ್ ಗೆ ತಿಳಿಸಿದ್ದಾರೆ.

ಎಪ್ರಿಲ್‌ನಲ್ಲಿ ಕೋವಿಡ್ 19 ರ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ  ಆ್ಯಂಟಿ ವೈರಲ್ ಔಷಧವನ್ನು ಅಕ್ರಮವಾಗಿ ಶೇಖರಿಸಿ, ವಿತರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಎಪ್ರಿಲ್ 10 ರಿಂದ 12 ರ ನಡುವೆ ದಕ್ಷಿಣ ಗುಜರಾತ್‌ನ ಸೂರತ್ ಹಾಗೂ  ನವಸರಿಯಲ್ಲಿ ನಿರ್ಗತಿಕ ರೋಗಿಗಳಿಗೆ ಬಿಜೆಪಿ ಮುಖಂಡರು ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಲಭ್ಯಗೊಳಿಸಿದ್ದಾರೆ ಎಂದು ಶಾಸಕ ಹರ್ಷ ಸಾಂಘ್ವಿ ಮಂಗಳವಾರ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಿದರು.

ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ರೆಮ್‌ಡೆಸಿವಿರ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಹಾಗೂ  ಎಪ್ರಿಲ್ ಹಾಗೂ  ಮೇ ತಿಂಗಳಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಯು  ಉತ್ತುಂಗದಲ್ಲಿದ್ದಾಗ ಅದರ ಕೊರತೆ  ಇರುವುದು ವರದಿಯಾಗಿದೆ.

ಗುಜರಾತ್ ಕಾಂಗ್ರೆಸ್ ಮುಖಂಡ ಪರೇಶ್ ಧನಾನಿ ತನ್ನ ವಿರುದ್ಧ ಮಾಡಿರುವ ಆರೋಪಗಳು ರಾಜಕೀಯ ಹಿತಾಸಕ್ತಿ ದಾವೆಯಂತೆ ಕಾಣುತ್ತದೆ  ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್  ಹಾಗೂ  ನ್ಯಾಯಮೂರ್ತಿ ಬಿರೆನ್ ವೈಷ್ಣವ್ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಸಾಂಘ್ವಿ ತಿಳಿಸಿದರು.

ಬಿಜೆಪಿಯ ಸೂರತ್ ಕಚೇರಿಯಿಂದ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಅಕ್ರಮ ಹಾಗೂ  ಅನಧಿಕೃತವಾಗಿ ವಿತರಿಸಿದ್ದಕ್ಕಾಗಿ ಶಾಸಕ ಸಾಂಘ್ವಿ ಹಾಗೂ ಲೋಕಸಭಾ ಸಂಸದ, ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ವಿರುದ್ಧ ಸ್ವತಂತ್ರ ವಿಚಾರಣೆ ನಡೆಸಬೇಕೆಂದು ಕಾಂಗ್ರೆಸ್ ನಾಯಕ ಧನಾನಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News