×
Ad

ನತಾಶಾ, ದೇವಾಂಗನಾ, ಆಸಿಫ್ ರನ್ನು ತಕ್ಷಣ ಬಿಡುಗಡೆ ಕುರಿತ ಆದೇಶ ಗುರುವಾರಕ್ಕೆ ಮುಂದೂಡಿದ ದಿಲ್ಲಿ ನ್ಯಾಯಾಲಯ

Update: 2021-06-16 23:18 IST

ಹೊಸದಿಲ್ಲಿ: ದಿಲ್ಲಿ ಗಲಭೆಯ ಪಿತೂರಿ ಪ್ರಕರಣದಲ್ಲಿ ಮಂಗಳವಾರ ಹೈಕೋರ್ಟ್ ನಿಂದ  ಜಾಮೀನು ಪಡೆದಿರುವ ಕಾರ್ಯಕರ್ತೆಯರಾದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಹಾಗೂ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ತಕ್ಷಣ ಬಿಡುಗಡೆ ಮಾಡುವ ಕುರಿತ ಆದೇಶವನ್ನು ದಿಲ್ಲಿ  ನ್ಯಾಯಾಲಯ ಗುರುವಾರಕ್ಕೆ ಮುಂದೂಡಿದೆ.

ದಿಲ್ಲಿ  ಹೈಕೋರ್ಟ್ ತಮಗೆ ಜಾಮೀನು ನೀಡಿದ ಒಂದು ದಿನದ ನಂತರವೂ ಕಾರ್ಯಕರ್ತೆಯರಾದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಹಾಗೂ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ಇನ್ನೂ ಜೈಲಿನಲ್ಲಿಯೇ ಉಳಿದಿದ್ದಾರೆ,  ಈ ಮೂವರ ಜಾಮೀನು ಹಾಗೂ  ವಿಳಾಸಗಳನ್ನು ಪರಿಶೀಲಿಸಲು ಇನ್ನಷ್ಟು ಸಮಯ ಬೇಕು ಎಂದಿರುವ ದಿಲ್ಲಿ ಪೊಲೀಸರು  ಮೂವರನ್ನು ಬಿಡುಗಡೆಗೊಳಿಸುವುದನ್ನು ವಿರೋಧಿಸಿ  ಅರ್ಜಿ ಸಲ್ಲಿಸಿದ್ದಾರೆ.

ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಹಾಗೂ  ಆಸಿಫ್ ಇಕ್ಬಾಲ್ ತನ್ಹಾಅವರು ಮಂಗಳವಾರ  ಹೈಕೋರ್ಟ್ ನಿಗದಿಪಡಿಸಿದ ಮಧ್ಯಾಹ್ನ 1 ಗಂಟೆಯ ಬಳಿಕವೂ ತಾವು  ಜೈಲಿನಲ್ಲಿದ್ದ ಕಾರಣ ತಕ್ಷಣ ಬಿಡುಗಡೆಗಾಗಿ ಮಂಗಳವಾರ ವಿಚಾರಣಾ ನ್ಯಾಯಾಲಯದ ಮೊರೆ ಹೋದರು. ತಲಾ  50,000ರೂ.ಗಳ ವೈಯಕ್ತಿಕ ಬಾಂಡ್‌ ಹಾಗೂ ಎರಡು ಜಾಮೀನು ಬಾಂಡ್  ಮೇಲೆ  ಮೂವರನ್ನು ಬಿಡುಗಡೆ ಮಾಡಲು ಹೈಕೋರ್ಟ್ ಆದೇಶಿಸಿತ್ತು

ಬುಧವಾರ ಮಧ್ಯಾಹ್ನ  ಈ ವಿಚಾರವನ್ನು ಆಲಿಸಲಾಯಿತು.  ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ರಿವಿಂದರ್ ಬೇಡಿ ಅವರು ಇಂದು ತಮ್ಮ ಆದೇಶವನ್ನು ನೀಡುವುದಾಗಿ ಹೇಳಿದರು. ಆದರೆ ಬಳಿಕ ಆದೇಶವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಇಬ್ಬರು ಕಾರ್ಯಕರ್ತರ ವಿಳಾಸಗಳನ್ನು ಪರಿಶೀಲಿಸಲು ಹೆಚ್ಚಿನ ಸಮಯವನ್ನು ಕೋರಿ ಪೊಲೀಸರು ಅರ್ಜಿ  ಸಲ್ಲಿಸಿದ್ದರು; "ಶಾಶ್ವತ" ವಿಳಾಸಗಳು ವಿಭಿನ್ನ ರಾಜ್ಯಗಳಲ್ಲಿದ್ದವು, ಇದು ಪ್ರಯಾಣದ ಸಮಸ್ಯೆಯನ್ನು ತಂದೊಡ್ಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಆರೋಪಿಗಳು ಜಾರ್ಖಂಡ್, ಅಸ್ಸಾಂ  ಹಾಗೂ  ಹರಿಯಾಣ ಎಂದು ಶಾಶ್ವತ ವಿಳಾಸವನ್ನು ನೀಡಿದ್ದಾರೆ. ಇದನ್ನು ಪರಿಶೀಲಿಸಬೇಕಾಗಿದೆ. ಪರಿಶೀಲನೆ ಪೂರ್ಣಗೊಳಿಸಲು ಸಮಯದ ಕೊರತೆಯಿದೆ" ಎಂದು ವಿಶೇಷ ಪ್ರಾಸಿಕ್ಯೂಟರ್ ಹೇಳಿದರು.

"ಎಲ್ಲಾ ಜಾಮೀನು ಬಾಂಡ್‌ಗಳನ್ನು ಪರಿಶೀಲಿಸಲು ನಾವು ಬ್ಯಾಂಕ್‌ಗಳಿಗೆ ಹೋಗಬೇಕಾಗಿದೆ. ಅವರ ಪ್ರತಿಯೊಂದು ದಾಖಲೆಯನ್ನು ಪರಿಶೀಲಿಸಲು ಸಮಯ ಬೇಕಾಗುತ್ತದೆ" ಎಂದು ತನಿಖಾಧಿಕಾರಿ ಹೇಳಿದರು.

ಕಳೆದ ವರ್ಷದ ಈಶಾನ್ಯ ದಿಲ್ಲಿ  ಗಲಭೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮೂವರು ಕಾರ್ಯಕರ್ತರಿಗೆ ಜಾಮೀನು ನೀಡುವ ಹೈಕೋರ್ಟ್ ಆದೇಶವನ್ನು ದಿಲ್ಲಿ  ಪೊಲೀಸರು ಉದ್ದೇಶಪೂರ್ವಕವಾಗಿ "ಮಟ್ಟಹಾಕಲು ಹಾಗೂ  ಹಾಳುಮಾಡಲು" ಪ್ರಯತ್ನಿಸುತ್ತಿದ್ದಾರೆ ಎಂದು ಸಿಪಿಎಂ ಪಾಲಿಟ್‌ಬ್ಯುರೊ ಸದಸ್ಯೆ ಬೃಂದಾ ಕಾರಟ್  ಬುಧವಾರ ಆರೋಪಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯದಡಿಯಲ್ಲಿ ಕೆಲಸ ಮಾಡುತ್ತಿರುವ ದಿಲ್ಲಿ  ಪೊಲೀಸರು ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರ ಜಾಮೀನಿನ ಬಿಡುಗಡೆಯನ್ನು ತಡೆಯಲು'ವಿಲಕ್ಷಣ' ನೆಪಗಳನ್ನು ನೀಡುತ್ತಿದ್ದಾರೆ ಎಂದು ನತಾಶಾಗೆ ಜೈಲಿನಿಂದ ಹೊರ ಬರಲು ಜಾಮೀನು  ನೀಡಿದ್ದ ಕಾರಟ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News