ಎಪ್ರಿಲ್ 19ರ ಲಸಿಕೆ ನೀತಿ ಕುರಿತು ರಾಜ್ಯಗಳ ಜತೆ ಕೇಂದ್ರ ಸರಕಾರ ಚರ್ಚಿಸಿಯೇ ಇರಲಿಲ್ಲ: ವರದಿ

Update: 2021-06-17 09:29 GMT

ಹೊಸದಿಲ್ಲಿ: ಕೋವಿಡ್ ಲಸಿಕೆ ವಿತರಣಾ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಬೇಕೆಂದು ರಾಜ್ಯ ಸರಕಾರಗಳೇ ಆಗ್ರಹಿಸಿದ್ದರೂ  ನಂತರ ಈ ಪ್ರಕ್ರಿಯೆಯಿಂದಾಗಿ ಎದುರಾದ ಸವಾಲುಗಳನ್ನು ಎದುರಿಸಲು ಅವುಗಳಿಗೆ ಸಾಧ್ಯವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಜೂನ್ 7ರಂದು ರಾಜ್ಯಗಳನ್ನೇ ದೂಷಿಸಿದ್ದರು. 

ಬಿಜೆಪಿ ನಾಯಕರುಗಳೂ ಇದೇ ರೀತಿಯ ಅಭಿಪ್ರಾಯ ಮೂಡಿಸಲು ಯತ್ನಿಸಿದ್ದರಲ್ಲದೆ ರಾಜ್ಯಗಳ ಆಗ್ರಹದ ಹಿನ್ನೆಲೆಯಲ್ಲಿಯೇ ಎಪ್ರಿಲ್ 19ರ ಲಸಿಕೆ ನೀತಿ ಜಾರಿಯಾಗಿತ್ತು ಎಂದು ಹೇಳಿಕೊಂಡಿದ್ದರು. ಕೇಂದ್ರ ಸರಕಾರ ಕೂಡ ಮೇ 11ರಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅಫಿಡವಿಟ್‍ನಲ್ಲಿ ರಾಜ್ಯ ಸರಕಾರಗಳು, ಲಸಿಕೆ ತಯಾರಕರು ಮತ್ತು ತಜ್ಞರ ಜತೆ ಹಲವಾರು ಸುತ್ತುಗಳ ಮಾತುಕತೆ ನಂತರ ಲಸಿಕೆ ನೀತಿ ಕುರಿತು ನಿರ್ಧರಿಸಲಾಗಿತ್ತು ಎಂದು ತಿಳಿಸಿತ್ತು.

ಆದರೆ ಹೆಚ್ಚಿನ ರಾಜ್ಯಗಳ ಜತೆ ಕೇಂದ್ರ ಸರಕಾರ  ಈ ಕುರಿತು ಚರ್ಚೆ ನಡೆಸಿಯೇ ಇಲ್ಲ ಎಂದು thenewsminute.com ವರದಿ ಮಾಡಿದೆ. ಪ್ರಧಾನಿ ಮೋದಿ ಹಾಗೂ ಹಲವು ರಾಜ್ಯಗಳ ಸೀಎಂಗಳು ಹಾಗೂ ಆರೋಗ್ಯ ಕಾರ್ಯದರ್ಶಿಗಳು ಹಲವು ಬಾರಿ ಸಭೆ ನಡೆಸಿದ್ದರೂ ಎಪ್ರಿಲ್ 19ರಂದು ಘೋಷಣೆಯಾದ ಲಸಿಕೆ ನೀತಿ ಕುರಿತು ಚರ್ಚೆಯೇ ನಡೆದಿರಲಿಲ್ಲವೆಂದು ತಿಳಿದು ಬಂದಿದೆ. ಹೆಚ್ಚಿನ ಸಭೆಗಳಲ್ಲಿ ಚರ್ಚೆಗಳು ಏಕಪಕ್ಷೀಯವಾಗಿದ್ದವು ಹಾಗೂ ಪ್ರಧಾನಿ ಹೆಚ್ಚಾಗಿ ಆಕ್ಸಿಜನ್ ಪೂರೈಕೆ, ಕಂಟೇನ್ಮೆಂಟ್ ವಲಯಗಳ ಕುರಿತಂತೆ  ಚರ್ಚೆ ನಡೆಸಿದ್ದರು.

 ಜನವರಿಯಲ್ಲಿ ನಡೆದ ಒಂದು ಸಭೆಯಲ್ಲಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಪುದುಚ್ಚೇರಿ ಸೀಎಂಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು ಎನ್ನಲಾಗಿದೆ.

ರಾಜ್ಯಗಳು ಲಸಿಕೆ ಪೂರೈಕೆ, ಖರೀದಿ ಕುರಿತಂತೆ ವಿಕೇಂದ್ರೀಕರಣಕ್ಕೆ ಆಗ್ರಹಿಸಿರಲಿಲ್ಲ, ಬದಲು  ಲಸಿಕೆ ನೀತಿ ಜಾರಿ, ನಿರ್ವಹಣೆಯಲ್ಲಿ ವಿಕೇಂದ್ರೀಕರಣ ಬಯಸಿದ್ದವು ಎಂದು ತಮಿಳುನಾಡು ವಿತ್ತ ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News