ಮಂಗಳೂರು : ‘ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಇಂಡಿಯಾ’ದ ಲಾಕ್ ಡೌನ್ ಸೇವೆಗೆ ‘ಮಸ್ಜಿದುಲ್ ಇಹ್ಸಾನ್’ ಕೇಂದ್ರ

Update: 2021-06-17 15:51 GMT

ಮಂಗಳೂರು, ಜೂ.17: ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನದೇ ಛಾಪು ಮೂಡಿಸಿರುವ ‘ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಎಚ್‌ಐಎಫ್) ಇಂಡಿಯಾ’ ಕೊರೋನ-ಲಾಕ್‌ಡೌನ್ ಮಧ್ಯೆಯೂ ಸಂಕಷ್ಟದಲ್ಲಿರುವ ಜನಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದೆ.

ವಿಶೇಷವೆಂದರೆ ‘ಎಚ್‌ಐಎಫ್ ಇಂಡಿಯಾ’ದ ಸೇವೆಗೆ ನಗರದ ವಾಸ್‌ಲೇನ್ ಸಮೀಪದ ‘ಮಸ್ಜಿದುಲ್ ಇಹ್ಸಾನ್’ ಕೇಂದ್ರ ಬಿಂದುವಾಗಿದೆ. ಈ ಮಸೀದಿಯನ್ನೇ ಕೇಂದ್ರವಾಗಿಸಿಕೊಂಡು ಜಾತಿ, ಮತ ಭೇದವಿಲ್ಲದೆ ಎಲ್ಲಾ ವರ್ಗದ ಜನರ ಸೇವೆಯನ್ನು ನಿರಂತರವಾಗಿ ನಡೆಸಲಾಗುತ್ತಿದೆ.
ಎಚ್‌ಐಎಫ್ ಅಧ್ಯಕ್ಷ ಸಾಜಿದ್ ಎ.ಕೆ. ನೇತೃತ್ವ ಮತ್ತು ಕೋಶಾಧಿಕಾರಿಯೂ ಆಗಿರುವ ಕೋವಿಡ್ ಯೋಧರ ಉಸ್ತುವಾರಿ ರಿಝ್ವಾನ್ ಪಾಂಡೇಶ್ವರ ಅವರ ಮಾರ್ಗದರ್ಶನದಲ್ಲಿ ಕೋವಿಡ್ 2ನೇ ಅಲೆ ಆರಂಭಗೊಳ್ಳುತ್ತಲೇ ‘ಮಸ್ಜಿದುಲ್ ಇಹ್ಸಾನ್’ನ ಮೂಲಕ ‘ಕೋವಿಡ್’ ಸೇವೆಯಲ್ಲಿ ಹಿಫ್ ತಂಡ ಸಕ್ರಿಯವಾಗಿದೆ.

ರಮಝಾನ್‌ನ ಮೊದಲ ದಿನದಿಂದಲೇ ನಗರವಲ್ಲದೆ ಹೊರವಲಯದ ಸುರತ್ಕಲ್ ಸಮೀಪದ ಮುಕ್ಕ ಮತ್ತು ತೊಕ್ಕೊಟ್ಟು ಸಮೀಪದ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯ ರೋಗಿಗಳು ಮತ್ತು ಅವರನ್ನು ಉಪಚರಿಸುವವರಿಗೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸಹರಿ ಮತ್ತು ಇಫ್ತಾರ್ ವೇಳೆ ಆಹಾರದ ವ್ಯವಸ್ಥೆ ಮಾಡಲಾಗಿತ್ತು. ದಿನಂಪ್ರತಿ ಸುಮಾರು 400ರಷ್ಟು ಮಂದಿ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದರು.

ರಮಝಾನ್ ಬಳಿಕವೂ ವೆನ್ಲಾಕ್ ಮತ್ತು ಲೇಡಿಗೋಶನ್ ಸರಕಾರಿ ಆಸ್ಪತ್ರೆಯಲ್ಲದೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮತ್ತವರನ್ನು ಉಪಚರಿಸುವ ಸುಮಾರು 200 ಮಂದಿಗೆ ಪ್ರತೀ ದಿನ ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆಹಾರವನ್ನು ಮಸ್ಜಿದುಲ್ ಇಹ್ಸಾನ್‌ನಲ್ಲೇ ತಯಾರಿಸಿ ಮೂರು ವಾಹನಗಳಲ್ಲಿ ಸಾಗಿಸಿ ವಿತರಿಸಲಾಗುತ್ತದೆ. ಆಹಾರ ತಯಾರಿಗೆ ಮೂವರು ಮತ್ತು ವಿತರಣೆಗೆ ಆರು ಮಂದಿ ಸೇವೆಯಲ್ಲಿ ನಿರತರಾಗಿದ್ದಾರೆ. ನಗರದ ಬಹುತೇಕ ಹೊಟೇಲ್‌ಗಳು ಮುಚ್ಚಲ್ಪಟ್ಟಿರುವ ಕಾರಣ ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ ವರ್ಗದ ಜನರಲ್ಲದೆ ಕೆಲವೊಮ್ಮೆ ಶ್ರೀಮಂತರು ಕೂಡ ‘ಎಚ್‌ಐಎಫ್’ನ ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟವರ ಮಯ್ಯತ್ ಸ್ನಾನದ ವ್ಯವಸ್ಥೆಯನ್ನೂ  ಕೂಡ ಮಸ್ಜಿದುಲ್ ಇಹ್ಸಾನ್‌ನಲ್ಲೇ ಕಲ್ಪಿಸಲಾಗುತ್ತದೆ. ಮಯ್ಯತ್ ಸ್ನಾನ ಮಾಡಿಸಲು ತಲಾ ಐವರು ಪುರುಷ ಮತ್ತು ಮಹಿಳಾ ತಂಡಗಳಿವೆ. ಈಗಾಗಲೆ ಸುಮಾರು 40 ಕೋವಿಡ್ ಮತ್ತು 5 ಕೋವಿಡೇತರ ಮಯ್ಯತ್ ಸ್ನಾನ ಮಾಡಿಸಲಾಗಿದೆ. ಪ್ರತಿಯೊಂದು ಮಯ್ಯತ್ ಸ್ನಾನ ಮಾಡಿಸಲು ಪಿಪಿಇ ಕಿಟ್ ಇತ್ಯಾದಿಗೆ ಕನಿಷ್ಠ 3,500 ರೂ. ತಗಲುತ್ತದೆ. ಅದನ್ನೂ ಎಚ್‌ಐಎಫ್ ಭರಿಸುತ್ತದೆ. ಅಲ್ಲದೆ ನಗರದ ಬಂದರ್‌ ನಲ್ಲಿರುವ ಕಂದಕ್ ಮುಸ್ಲಿಂ ಜಮಾಅತ್ ಮತ್ತು ಎಫ್‌ಎಫ್‌ಪಿ (ಫ್ರೆಂಡ್ಸ್ ಫಾರ್ ಪೂವರ್) ಸಂಘಟನೆಯ ಸಹಕಾರದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡುತ್ತದೆ. ಈ ಸಂದರ್ಭ ಆರ್ಥಿಕವಾಗಿ ತೀರಾ ಹಿಂದುಳಿದ ಮೃತರ ಕುಟುಂಬಗಳಿಗೆ ಆಹಾರ ಕಿಟ್ ನೀಡಲಾಗುತ್ತದೆ.

ಕೇರಳ ಕುವೈತ್ ಮುಸ್ಲಿಂ ಅಸೋಸಿಯೇಶನ್ (ಕೆಕೆಎಂಎ) ಕರ್ನಾಟಕ ಚಾಪ್ಟರ್‌ನ ಸಹಕಾರದಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಪ್ರತಿಯೊಬ್ಬ ರೋಗಿಗೆ 10 ಲೀ.ನ ಮೂರು ಆಕ್ಸಿಜನ್ ಸಿಲಿಂಡರ್ ಅಗತ್ಯವಿರುತ್ತದೆ. ಈಗಾಗಲೆ 10 ರೋಗಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.

ಕೋವಿಡ್‌ನ ತುರ್ತು ಸಂದರ್ಭದಲ್ಲಿ ರಕ್ತದಾನವನ್ನು ಕೂಡ ಎಚ್‌ಐಎಫ್ ತಂಡ ಮಾಡಿದೆ. ಜೊತೆಗೆ ಹಿಫ್ ಕಚೇರಿಯಲ್ಲಿ ಹೆಲ್ಪ್‌ಡೆಸ್ಕ್ ಕೂಡ ತೆರೆಯಲಾಗಿದೆ. ವೈದ್ಯಕೀಯ ಮತ್ತಿತರ ಸಲಹೆ ಕೋರಿ ದಿನಂಪ್ರತಿ ನೂರಾರು ಕರೆಗಳು ಈ ಡೆಸ್ಕ್‌ಗೆ ಬರುತ್ತವೆ. ಇದೆಲ್ಲವೂ ಕೋವಿಡ್ ಕಾಲದ ಸೇವಾ ಚಟುವಟಿಕೆಯಾಗಿವೆ.

''ಲಾಕ್‌ಡೌನ್ ಅವಧಿಯಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳು ಮತ್ತು ಅವರನ್ನು ಉಪಚರಿಸುವವರು ಆಹಾರದ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡ ನಾವು ಅವರಿಗೆ ರಾತ್ರಿಯ ಆಹಾರದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದವರು ಆಹಾರದ ಕಿಟ್ ಪಡೆಯುವುದು ಸಾಮಾನ್ಯ. ಆದರೆ ಕೆಲವರ ಕೈಯಲ್ಲಿ ತುಂಬಾ ಹಣವಿದೆ. ಆದರೆ ಸಕಾಲಕ್ಕೆ ಅವರಿಗೆ ಆಹಾರ ಸಿಗುವುದಿಲ್ಲ. ಅಂತಹವರಿಗೆ ಇಂತಹ ಸಂದರ್ಭ ಆಹಾರ ಸಿಗುವಾಗ ಆಗುವ ಖುಷಿಯೇ ಬೇರೆ. ನಮ್ಮಿಂದ ಫಲಾನುಭವಿಗಳಾದ ಕೆಲವು ಶ್ರೀಮಂತರು ನಮಗೆ ಹಣ ನೀಡಲು ಮುಂದೆ ಬಂದದ್ದೂ ಇದೆ. ಆದರೆ ನಾವು ಯಾರಿಂದಲೂ ಹಣ ಪಡೆದಿಲ್ಲ. ಕೆಲವರಂತೂ ನಮ್ಮ ಈ ಸೇವೆಯನ್ನು ಮನಗಂಡು ಒಂದು ದಿನದ ಆಹಾರದ ಕಿಟ್‌ಗೆ ತಗಲುವ ಖರ್ಚನ್ನು ಭರಿಸಿ ನಿಮ್ಮ ಸೇವೆಯಲ್ಲಿ ನಮ್ಮದೂ ಕಿಂಚಿತ್ ಕಾಣಿಕೆಯಿರಲಿ ಎಂದದ್ದೂ ಇದೆ. ನಾವು ಯಾವತ್ತೂ ಜಾತಿ, ಧರ್ಮ ನೋಡದೆ ಎಲ್ಲರಿಗೂ ಸಹಾಯ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ''.

- ಎ.ಕೆ.ಸಾಜಿದ್ 
ಅಧ್ಯಕ್ಷರು, ಎಚ್‌ಐಎಫ್ ಇಂಡಿಯಾ, ಮಂಗಳೂರು

''ಮಸ್ಜಿದುಲ್ ಇಹ್ಸಾನ್’ ಕೇಂದ್ರವಾಗಿಸಿಕೊಂಡು ‘ಎಚ್‌ಐಎಫ್’ ತಂಡವು ಕಳೆದ ಹಲವು ವರ್ಷದಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಕೋವಿಡ್ ಕಾಲದಲ್ಲಿ ನಮ್ಮ ತಂಡವು ವಿಶೇಷ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ನಮ್ಮ ಸೇವೆಯನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ‘ಪೊಲೀಸ್ ಸಮನ್ವಯ’ ವಾಟ್ಸ್‌ಆ್ಯಪ್ ಗ್ರೂಪನ್‌ನಲ್ಲೂ ಇದೆ ಇದರಲ್ಲಿ ಪೊಲೀಸರಲ್ಲದೆ ವಿವಿಧ ಸಮಾಜಮುಖಿ ಸಂಘಟನೆಗಳು, ಗಣ್ಯರು ಇದ್ದಾರೆ. ತುರ್ತು ಸಂದರ್ಭದಲ್ಲಿ ಈ ಗ್ರೂಪ್‌ನ ಮೂಲಕ ಮಾಹಿತಿ ವಿನಿಮಯ ಮಾಡಿಕೊಂಡು ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದೇವೆ.

-ರಿಝ್ವಾನ್ ಪಾಂಡೇಶ್ವರ
ಕೋಶಾಧಿಕಾರಿ, ಎಚ್‌ಐಎಫ್ ಹಾಗೂ ಉಸ್ತುವಾರಿ ಕೋವಿಡ್ ವಾರಿಯರ್ಸ್ ತಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News