ಉತ್ತರಪ್ರದೇಶ: ಆಧಾರ್ ಕಾರ್ಡ್ ಇಲ್ಲದೆ ಪಡಿತರ ವಂಚಿತರಾಗಿ 2 ತಿಂಗಳಿಂದ ಉಪವಾಸವಿದ್ದ ಕುಟುಂಬ‌

Update: 2021-06-17 17:01 GMT

ಲಕ್ನೋ, ಜೂ.17: ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಹೊಂದಿಲ್ಲದ ಮಹಿಳೆ ಹಾಗೂ ಆಕೆಯ 5 ಮಕ್ಕಳು ಕಳೆದ 2 ತಿಂಗಳಿನಿಂದ ಉಪವಾಸ ಬಿದ್ದ ಕಾರಣ ನಿತ್ರಾಣಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರಪ್ರದೇಶದ ಆಲಿಗಢ ಪಟ್ಟಣದಲ್ಲಿ ವರದಿಯಾಗಿದೆ. 

ಗುಡ್ಡಿ ಎಂಬ ಹೆಸರಿನ 45 ವರ್ಷದ ಮಹಿಳೆಯ ಪತಿ ಕಳೆದ ವರ್ಷ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡೌನ್ ವಿಧಿಸಿದಾಗ ಮೃತಪಟ್ಟಿದ್ದ. ಈತನ 20 ವರ್ಷದ ಹಿರಿಯ ಮಗ ಗಾರೆ ಕೆಲಸ ಮಾಡುತ್ತಿದ್ದು ಈತನ ದುಡಿಮೆಯಿಂದ ಕುಟುಂಬದ ಹೊಟ್ಟೆ ತುಂಬುತ್ತಿತ್ತು. ಆದರೆ ಈ ವರ್ಷ ಕೊರೋನ ಸೋಂಕಿನ 2ನೇ ಅಲೆ ಉಲ್ಬಣಗೊಂಡಾಗ ಈತ ಕೆಲಸ ಕಳೆದುಕೊಂಡಿದ್ದ. ಆ ಬಳಿಕ ಕಳೆದ 2 ತಿಂಗಳಿಂದ ಕುಟುಂಬದ 6 ಸದಸ್ಯರು ಉಪವಾಸವಿದ್ದಾರೆ ಎಂದು ಮೂಲಗಳು ಹೇಳಿವೆ. 

ತಾನು ಸ್ಥಳೀಯ ಏಜೆಂಟ್ ಮೂಲಕ ಆಧಾರ್ ಹಾಗೂ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದು 350 ರೂ. ಶುಲ್ಕ ಕೂಡಾ ಪಾವತಿಸಿದ್ದೆ. ಆದರೆ ಬಳಿಕ ತನ್ನ ಮೊಬೈಲ್ ಕಾರ್ಡ್ನ ಸಿಮ್ ಕಳೆದುಹೋಗಿದ್ದರಿಂದ ಈ ಕಾರ್ಡ್ gಳನ್ನು ಪಡೆಯಲು ಸಾಧ್ಯವಾಗದು ಎಂದು ಏಜೆಂಟ್ ಹೇಳಿದ್ದ ಎಂದು ಗುಡ್ಡಿ ಹೇಳಿದ್ದಾಳೆ. ಬಳಿಕ ಗ್ರಾಮ ಪಂಚಾಯತ್ ಮುಖ್ಯಸ್ಥರಲ್ಲಿ ನೆರವು ಕೋರಿದಾಗ ಅವರು ನಿರಾಕರಿಸಿದ್ದಾರೆ. 

100 ರೂ. ಸಾಲ ನೀಡಲೂ ಅವರು ಒಪ್ಪಲಿಲ್ಲ. ಪಡಿತರ ಅಂಗಡಿಗೆ ತೆರಳಿ 5 ಕಿ.ಗ್ರಾಂ ಅಕ್ಕಿ ನೀಡಲು ಕೋರಿದಾಗ ಅವರೂ ಬೈದು ಕಳಿಸಿದ್ದಾರೆ. ಹಸಿವು ಮತ್ತು ಕಾಯಿಲೆಯ ಹೊಡೆತದಿಂದ ನಾವು ಕಂಗಾಲಾಗಿದ್ದೆವು. ನಮ್ಮ ಮನೆಯಲ್ಲಿ ತಿನ್ನಲು ಏನೂ ಇಲ್ಲದಾಗ ನೆರೆಮನೆಯವರಲ್ಲಿ ಅಂಗಲಾಚಿದಾಗ ಒಂದೆರಡು ದಿನ ಕೊಟ್ಟರು, ಬಳಿಕ ಅವರೂ ಇಲ್ಲ ಎಂದು ಕೈಯಾಡಿಸಿದರು ಎಂದು ಮಹಿಳೆ ಹೇಳಿದ್ದಾಳೆ. 

ಕುಟುಂಬದ ಬಳಿ ಆಧಾರ್ ಕಾರ್ಡ್ ಅಥವಾ ಪಡಿತರ ಕಾರ್ಡ್ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ಬಹುಷಃ ಅವರು ಕಾರ್ಡ್ ಪಡೆಯಲು ಪ್ರಯತ್ನಿಸಿಲ್ಲ. ಅವರ ಆದಾಯ ಮೂಲ ಬತ್ತಿಹೋದ ಕಾರಣ ಕಾರ್ಡ್ ಪಡೆಯಲು ಅವರು ಪ್ರಯತ್ನಿಸಿಲ್ಲ ಎಂದು ಕಾಣುತ್ತೆ. ಅಸಹಾಯಕ ಕುಟುಂಬಕ್ಕೆ ನೆರವು ನಿರಾಕರಿಸಿದ ಗ್ರಾಮಪಂಚಾಯತ್ ಮುಖ್ಯಸ್ಥರು ಹಾಗೂ ಪಡಿತರ ಅಂಗಡಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗ ಅವರಿಗೆ 5,000 ರೂ. ನೀಡಿದ್ದು ಅವರ ಅಂತ್ಯೋದಯ ಪಡಿತರ ಕಾರ್ಡ್ ಅವರಿಗೆ ಶೀಘ್ರ ದೊರಕಲಿದೆ. ಅಲ್ಲದೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನೂ ಒದಗಿಸಲಾಗುವುದು ಎಂದು ಆಲಿಗಢ ಜಿಲ್ಲಾಧಿಕಾರಿ ಚಂದ್ರಭೂಷಣ್ ಸಿಂಗ್ ಹೇಳಿದ್ದಾರೆ. 

ಆಲಿಗಢ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಮಹಿಳೆ ಹಾಗೂ ಆಕೆಯ 5 ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಚೇತರಿಸಿಕೊಳ್ಳಲಿದ್ದಾರೆ ಎಂದು ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಅಮಿತ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News