ನಂದಿಗ್ರಾಮ ಚುನಾವಣಾ ಪ್ರಕರಣ ಆಲಿಸಲು ನೇಮಿಸಿರುವ ನ್ಯಾಯಾಧೀಶರಿಗೆ ಬಿಜೆಪಿಯೊಂದಿಗೆ ಸಂಬಂಧವಿದೆ: ಟಿಎಂಸಿ ಆರೋಪ

Update: 2021-06-18 13:46 GMT

ಕೋಲ್ಕತ್ತ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸ್ಫರ್ಧಿಸಿದ್ದರು. ಫಲಿತಾಂಶದ ವೇಳೆ ಕೆಲ ಗೊಂದಲಗಳುಂಟಾದ ಬಳಿಕ ಸುವೇಂದು ಅಧಿಕಾರಿಯನ್ನು ವಿಜಯಿ ಎಂದು ಘೋಷಿಸಲಾಗಿತ್ತು. ಈ ಕುರಿತು ಮಮತಾ ಬ್ಯಾನರ್ಜಿ ಕೊಲ್ಕತ್ತಾ ಹೈಕೋರ್ಟ್‌ ಮೆಟ್ಟಿಲೇರಿದ್ದು, ಈ ಪ್ರಕರಣವನ್ನು ವಿಚಾರಣೆ ಮಾಡಲು ನೇಮಿಸಿರುವ ನ್ಯಾಯಾಧೀಶರಿಗೆ ಬಿಜೆಪಿಯೊಂದಿಗೆ ಸಂಪರ್ಕವಿದೆ ಎಂದು ತೃಣಮೂಲ ಕಾಂಗ್ರೆಸ್‌ ಆರೋಪಿಸಿದೆ.

ಪ್ರಕರಣವನ್ನು ಆಲಿಸಲು ನೇಮಿಸಿರುವ ನ್ಯಾಯಾಧೀಶ ಕೌಶಿಕ್‌ ಚಂದಾ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್‌ ರೊಂದಿಗೆ ಬಿಜೆಪಿಯ ಕಾನೂನು ಸೆಲ್‌ ನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಫೋಟೊವನ್ನು ಟಿಎಂಸಿ ಹಂಚಿಕೊಂಡಿದೆ. ಅಚ್ಚರಿಯೇನಿಲ್ಲ, ಈ ವ್ಯಕ್ತಿಯನ್ನು ನಂದಿಗ್ರಾಮ ಪ್ರಕರಣದ ವಿಚಾರಣೆಗೆ ನ್ಯಾಯಾಧೀಶರಾಗಿ ನೇಮಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಈ ಹಿಂದೆ ಜಸ್ಟಿಸ್‌ ಚಂದಾ ಭಾರತೀಯ ಜನತಾ ಪಕ್ಷದ ಪರವಾಗಿ ವಾದಿಸಿರುವ ಪ್ರಕರಣಗಳ ಪಟ್ಟಿಯನ್ನು ತೃಣಮೂಲ ಕಾಂಗ್ರೆಸ್‌ ಮುಖಂಡ ಡೆರೆಕ್‌ ಓಬ್ರಿಯನ್‌ ಮುಂದಿಟ್ಟಿದ್ದಾರೆ. ಇದು ಕಾಕತಾಳೀಯವೇ? ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಮಮತಾ ಬ್ಯಾನರ್ಜಿಯವರ ತಂಡವು ಜಸ್ಟಿಸ್‌ ಚಂದಾರೊಂದಿಗೆ ಮನವಿ ಮಾಡಿತ್ತು. ಅದರಂತೆ ವಿಚಾರಣೆಯನ್ನು ಜೂನ್.‌24ಕ್ಕೆ ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News