ಅಂತಿಮ ವರ್ಷದ ವೈದ್ಯಕೀಯ ಪಿಜಿ ಪರೀಕ್ಷೆಗಳ ರದ್ದತಿ, ಮುಂದೂಡಿಕೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

Update: 2021-06-18 15:02 GMT

ಹೊಸದಿಲ್ಲಿ,ಜೂ.18: ಪರೀಕ್ಷಾರ್ಥಿ ವೈದ್ಯರು ಕೋವಿಡ್-19 ಕರ್ತವ್ಯದಲ್ಲಿ ತೊಡಗಿದ್ದಾರೆಂಬ ಕಾರಣಕ್ಕೆ ಅಂತಿಮ ವರ್ಷದ ವೈದ್ಯಕೀಯ ಸ್ನಾತಕೋತ್ತರ (ಪಿಜಿ) ಪರೀಕ್ಷೆಗಳನ್ನು ರದ್ದುಗೊಳಿಸಲು ಅಥವಾ ಮುಂದೂಡಲು ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ನಿರ್ದೇಶ ನೀಡಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.

ಅಂತಿಮ ವರ್ಷದ ಪಿಜಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಅಥವಾ ಮುಂದೂಡುವಂತೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಯಾವುದೇ ಸಾರ್ವತ್ರಿಕ ಆದೇಶವನ್ನು ತಾನು ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ.ಆರ್.ಶಾ ಅವರ ರಜಾಕಾಲದ ಪೀಠವು ತಿಳಿಸಿತು.
 
ಅಂತಿಮ ವರ್ಷದ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸುವಾಗ ಕೋವಿಡ್-19 ಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳುವಂತೆ ಈಗಾಗಲೇ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್ಎಂಸಿ)ಯು ಎಪ್ರಿಲ್ನಲ್ಲಿ ವಿಶ್ವವಿದ್ಯಾಲಯಗಳಿಗೆ ಸೂಚಿಸಿತ್ತು ಎಂದು ಬೆಟ್ಟು ಮಾಡಿದ ಪೀಠವು, ‘ಸಾಧ್ಯವಿದ್ದ ಸಂದರ್ಭಗಳಲ್ಲಿ ನಾವು ಹಸ್ತಕ್ಷೇಪ ಮಾಡಿದ್ದೇವೆ,ಉದಾಹರಣೆಗೆ ವಿದ್ಯಾರ್ಥಿಗಳಿಗೆ ತಯಾರಿಗೆ ಸೂಕ್ತ ಸಮಯ ನೀಡದೆ ಪರೀಕ್ಷಾ ದಿನಾಂಕಗಳನ್ನು ನಿಗದಿ ಮಾಡುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ನಮಗೆ ಮನದಟ್ಟಾದ ಬಳಿಕ ಏಮ್ಸ್-ದಿಲ್ಲಿ ನಡೆಸುವ ಐಎನ್ಐ ಸಿಇಟಿ ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಲಾಗಿತ್ತು ’ಎಂದು ಹೇಳಿತು.

ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸಲು ವಿದ್ಯಾರ್ಥಿಗಳಿಗೆ ಸೂಕ್ತ ಕಾಲಾವಕಾಶ ಒದಗಿಸುವಂತೆ ಎಲ್ಲ ವಿವಿಗಳಿಗೆ ಸೂಚಿಸುವಂತೆ ಎನ್ಎಂಸಿಗೆ ನಿರ್ದೇಶನ ನೀಡುವಂತೆ ಕೋರಿ ರಿಟ್ ಅರ್ಜಿಯನ್ನು ಸಲ್ಲಿಸಿರುವ 29 ವೈದ್ಯರ ಪರ ಹಿರಿಯ ವಕೀಲ ಸಂಜಯ ಹೆಗ್ಡೆ ಅವರ ಮನವಿಯನ್ನು ತಿರಸ್ಕರಿಸಿದ ಪೀಠವು,‘ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಕ್ತ ಸಮಯ ಯಾವುದು ಎನ್ನುವುದು ನಮಗೆ ಗೊತ್ತಿಲ್ಲ. ಸೂಕ್ತ ಸಮಯವನ್ನು ನ್ಯಾಯಾಲಯವು ನಿರ್ಧರಿಸುವುದಾದರೂ ಹೇಗೆ? ಪ್ರತಿಯೊಬ್ಬರೂ ತಮ್ಮದೇ ಆದ ಸೂಕ್ತ ಸಮಯವನ್ನು ಹೊಂದಿರಬಹುದು. ಅದನ್ನು ವಿಶ್ವವಿದ್ಯಾಲಯಗಳು ಎನ್ಎಂಸಿಯ ಸಲಹೆಗಳ ಮೇರೆಗೆ ತಮ್ಮ ಪ್ರದೇಶದಲ್ಲಿಯ ಕೋವಿಡ್ ಸ್ಥಿತಿಗನುಗುಣವಾಗಿ ನಿರ್ಧರಿಸಲಿ ’ ಎಂದು ಹೇಳಿತು.

‘ಭಾರತದಂತಹ ವಿಶಾಲ ಕ್ಷೇತ್ರದಲ್ಲಿ ಸಾಂಕ್ರಾಮಿಕದ ಸ್ಥಿತಿಯು ಎಲ್ಲ ಕಡೆಗಳಲ್ಲಿಯೂ ಒಂದೇ ರೀತಿಯಲ್ಲಿಲ್ಲ. ಎಪ್ರಿಲ್-ಮೇ ಅವಧಿಯಲ್ಲಿ ದಿಲ್ಲಿಯಲ್ಲಿ ಸ್ಥಿತಿಯು ತೀರ ಕೆಟ್ಟದ್ದಾಗಿತ್ತು,ಆದರೆ ಈಗ ದಿನಕ್ಕೆ 200 ಪ್ರಕರಣಗಳೂ ವರದಿಯಾಗುತ್ತಿಲ್ಲ. ಆದರೆ ಕರ್ನಾಟಕದಲ್ಲಿ ಸ್ಥಿತಿಯು ಈಗಲೂ ಚೆನ್ನಾಗಿಲ್ಲ. ಹೀಗಾಗಿ ವಿವಿಗಳ ಅಭಿಪ್ರಾಯಗಳನ್ನು ತಿಳಿದುಕೊಳ್ಳದೆ ನಾವು ಸಾರ್ವತ್ರಿಕ ಆದೇಶವನ್ನು ಹೊರಡಿಸುವಂತಿಲ್ಲ ’ಎಂದೂ ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News