ದೇಶದ ಕಾನೂನು ಪರಮೋಚ್ಚ, ನಿಮ್ಮ ನೀತಿಯಲ್ಲ: ಟ್ವಿಟರ್ ಗೆ ಬಿಸಿ ಮುಟ್ಟಿಸಿದ ಸಂಸದೀಯ ಸಮಿತಿ

Update: 2021-06-18 17:01 GMT

ಹೊಸದಿಲ್ಲಿ,ಜೂ.18: ಭಾರತೀಯ ಕಾನೂನುಗಳು ಪರಮೋಚ್ಚವಾಗಿಯೇ ಹೊರತು ನಿಮ್ಮ ನೀತಿಯಲ್ಲ, ನೀವು ಈ ನೆಲದ ಕಾನೂನುಗಳಿಗೆ ವಿಧೇಯರಾಗಿರಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ ನೇತೃತ್ವದ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿಯು ಶುಕ್ರವಾರ ತನ್ನೆದುರು ವಿಚಾರಣೆಗೆ ಹಾಜರಾಗಿದ್ದ ಮೈಕ್ರೊಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ನ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದೆ. ಸಮಿತಿಯ ಸದಸ್ಯರು ಪಕ್ಷಭೇದವನ್ನು ಮರೆತು ಟ್ವಿಟರ್ ನೀತಿಯನ್ನು ಖಂಡಿಸಿದರು ಎಂದು ಸಮಿತಿಯಲ್ಲಿನ ಮೂಲಗಳು ತಿಳಿಸಿವೆ.

ಸುಮಾರು 95 ನಿಮಿಷಗಳ ನಡೆದ ಸಮಿತಿ ಸಭೆಗೆ ಹಾಜರಾಗಿದ್ದ ಟ್ವಿಟರ್ ಇಂಡಿಯಾದ ಪಬ್ಲಿಕ್ ಪಾಲಿಸಿ ಮ್ಯಾನೇಜರ್ ಶಗುಫ್ತಾ ಕಮ್ರಾನ್ ಮತ್ತು ಕಾನೂನು ಸಲಹೆಗಾರರಾದ ಆಯುಷಿ ಕಪೂರ್ ಅವರು ಕಂಪನಿಯೇಕೆ ಭಾರತದಲ್ಲಿ ಮುಖ್ಯ ಪಾಲನಾ ಅಧಿಕಾರಿಯನ್ನು ನೇಮಕಗೊಳಿಸಿಲ್ಲ ಮತ್ತು ತೊಂದರೆಗಳನ್ನು ಸೃಷ್ಟಿಸುವ,ವಿಶೇಷವಾಗಿ ಕೋಮು ದ್ವೇಷವನ್ನು ಪ್ರಚೋದಿಸುವ ವಿಷಯಗಳ ಕುರಿತು ಕಂಪನಿಯ ನೀತಿಯೇನು ಎಂಬಿತ್ಯಾದಿ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು.

ತಮ್ಮ ನೀತಿಗಳು ತಮಗೆ ಅತ್ಯಂತ ಮುಖ್ಯವಾಗಿವೆ ಮತ್ತು ತಾವು ಅವುಗಳನ್ನು ಅನುಸರಿಸುತ್ತಿದ್ದೇವೆ ಎಂದು ಸಮಿತಿಗೆ ಹೇಳಿದ ಈ ಅಧಿಕಾರಿಗಳು,ಟ್ವಿಟರ್ ಭಾರತೀಯ ಕಾನೂನುಗಳನ್ನು ಗೌರವಿಸುತ್ತದೆ ಎಂದೂ ತಿಳಿಸಿದರು.

ಕಂಪನಿಯಲ್ಲಿ ತಮ್ಮ ಸ್ಥಾನಮಾನ ಮತ್ತು ಪ್ರಮುಖ ನೀತಿ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ತಾವು ಹೊಂದಿರುವ ಅಧಿಕಾರವನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸಮಿತಿಯು ಕಮ್ರಾನ್ ಮತ್ತು ಕಪೂರ್ ಅವರಿಗೆ ಸೂಚಿಸಿತು ಎಂದು ಮೂಲಗಳು ತಿಳಿಸಿದವು.
ಫೇಸ್ಬುಕ್,ಯು ಟ್ಯೂಬ್ ಮತ್ತು ಗೂಗಲ್ ನೀತಿಗಳನ್ನು ಪರಿಶೀಲಿಸಲು ಈ ಕಂಪನಿಗಳ ಅಧಿಕಾರಿಗಳನ್ನು ತನ್ನೆದುರು ಕರೆಸಲು ಸಮಿತಿಯು ಈಗ ನಿರ್ಧರಿಸಿದೆ.

‘ಪಾರದರ್ಶಕತೆ, ಅಭಿವ್ಯಕ್ತಿ ಸ್ವಾತಂತ್ರ ಮತ್ತು ಖಾಸಗಿತನ ಕುರಿತು ನಮ್ಮ ನೀತಿಗಳಿಗೆ ಅನುಗುಣವಾಗಿ ಆನ್ ಲೈನ್ ನಲ್ಲಿ ನಾಗರಿಕರ ಹಕ್ಕುಗಳ ಸುರಕ್ಷತೆಗಾಗಿ ಸಮಿತಿಯೊಂದಿಗೆ ಮತ್ತು ಸರಕಾರದೊಂದಿಗೆ ಕಾರ್ಯ ನಿರ್ವಹಿಸಲು ನಮ್ಮ ಕಂಪನಿ ಸಿದ್ಧವಿದೆ ’ಎಂದು ಸಭೆಯ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಟ್ವಿಟರ್ ವಕ್ತಾರರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News