ಭಾರತದಲ್ಲಿ ಕೊರೋನ ಮೂರನೇ ಅಲೆ ಅಕ್ಟೋಬರ್ ಒಳಗೆ ಅಪ್ಪಳಿಸುವ ಸಾಧ್ಯತೆ: ವರದಿ

Update: 2021-06-18 17:16 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜೂ. 18: ದೇಶದಲ್ಲಿ ಕೊರೋನ 3ನೇ ಅಲೆ ಅಕ್ಟೋಬರ್ ನ ಒಳಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ವೈದ್ಯಕೀಯ ತಜ್ಞರ ಗುಂಪನ್ನು ಸಮೀಕ್ಷೆ ನಡೆಸಿರುವ ರಾಯ್ಟರ್ಸ್ ಸುದ್ದಿ ಸಂಸ್ಥೆ ಹೇಳಿದೆ. ಈ ಮೂರನೇ ಅಲೆಯನ್ನು ಎರಡನೇ ಅಲೆಗಿಂತ ಹೆಚ್ಚು ಸಮರ್ಥವಾಗಿ ನಿಯಂತ್ರಿಸುವ ಸಾಧ್ಯತೆ ಇದೆ. ಆದರೂ ಕೊರೋನ ಸಾಂಕ್ರಾಮಿಕ ರೋಗ ಕನಿಷ್ಠ ಒಂದು ವರ್ಷ ಸಾರ್ವಜನಿಕ ಆರೋಗ್ಯದ ಆತಂಕದ ವಿಷಯವಾಗಿ ಮುಂದುವರಿಯುತ್ತದೆ ಎಂದು ಅದು ಹೇಳಿದೆ.

ಸಂಕ್ಷಿಪ್ತ ಸಮೀಕ್ಷೆಗಾಗಿ ರಾಯ್ಟರ್ ಜಗತ್ತಿನಾದ್ಯಂತದ 40 ಆರೋಗ್ಯ ತಜ್ಞರು, ವೈದ್ಯರು, ವೈರಾಣು ತಜ್ಞರು, ಸಾಂಕ್ರಾಮಿಕ ರೋಗ ತಜ್ಞರು ಹಾಗೂ ಪ್ರಾದ್ಯಾಪಕರನ್ನು ಜೂನ್ 3ರಿಂದ 17ರ ವರೆಗೆ ಸಂದರ್ಶನ ನಡೆಸಿದೆ. ಕೊರೋನ ಮೂರನೇ ಅಲೆ ಅಕ್ಟೋಬರ್ನ ಒಳಗೆ ಅಪ್ಪಳಿಸಲಿದೆ ಎಂದು ಇವರಲ್ಲಿ ಶೇ. 85ಕ್ಕೂ ಅಧಿಕ ಅಥವಾ 24 ತಜ್ಞರಲ್ಲಿ 21 ಮಂದಿ ಊಹಿಸಿದ್ದಾರೆ. ಆಗಸ್ಟ್ ನ ಒಳಗೆ ಬರುತ್ತದೆ ಎಂದು ಊಹಿಸಿದ 3 ಮಂದಿ ತಜ್ಞರು ಹಾಗೂ ಸೆಪ್ಟಂಬರ್ ಒಳಗೆ ಬರುತ್ತದೆ ಎಂದು ಊಹಿಸಿದ 12 ಮಂದಿ ತಜ್ಞರು ಕೂಡ ಇವರಲ್ಲಿ ಒಳಗೊಂಡಿದ್ದಾರೆ. ಇತರರು ಕೊರೋನ ಮೂರನೇ ಅಲೆ ಮುಂದಿನ ವರ್ಷ ನವೆಂಬರ್ ಹಾಗೂ ಫೆಬ್ರವರಿ ನಡುವೆ ಅಪ್ಪಳಿಸುತ್ತದೆ ಎಂದು ಊಹಿಸಿದ್ದಾರೆ. ಆದರೆ, ಕೊರೋನ ಮೂರನೇ ಅಲೆಯನ್ನು ಎರಡನೇ ಅಲೆಗಿಂತ ಉತ್ತಮವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು 34 ಮಂದಿ ತಜ್ಞರಲ್ಲಿ 24 ಮಂದಿ ಅಥವಾ ಶೇ. 70ಕ್ಕೂ ಅಧಿಕ ತಜ್ಞರು ಭರವಸೆ ವ್ಯಕ್ತಪಡಿಸಿದ್ದಾರೆ. 

‘‘ವಿವಿಧ ಲಸಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುದರಿಂದ ಸೋಂಕಿನ ಪ್ರಕರಣಗಳು ಕಡಿಮೆಯಾಗಲಿವೆ. ಇದರಿಂದ ಮೂರನೇ ಅಲೆ ಹೆಚ್ಚು ನಿಯಂತ್ರಣದಲ್ಲಿ ಇರಲಿದೆ’’ ಎಂದು ದಿಲ್ಲಿ ಏಮ್ಸ್ ನ ಡಾ. ರಣದೀಪ್ ಗುಲೆರಿಯಾ ತಿಳಿಸಿದ್ದರು. ಮಕ್ಕಳು ಹಾಗೂ 18 ವರ್ಷಕ್ಕಿಂತ ಕೆಳಗಿನವರ ಮೇಲೆ ಕೊರೋನ ಮೂರನೇ ಅಲೆಯ ಪರಿಣಾಮದ ಬಗ್ಗೆ ತಜ್ಞರ ಅಭಿಪ್ರಾಯದಲ್ಲಿ ಭಿನ್ನತೆ ಇರುವಂತೆ ಕಾಣುತ್ತದೆ. 40 ಮಂದಿ ತಜ್ಞರಲ್ಲಿ 26 ಮಂದಿ ಮೂರನೇ ಅಲೆ ಮಕ್ಕಳಿಗೆ ತೀವ್ರ ಅಪಾಯಕಾರಿ ಎಂದು ತಿಳಿಸಿದ್ದಾರೆ. ಉಳಿದ 14 ಮಂದಿ ಅದು ನಿಜವಲ್ಲ ಎಂದು ಹೇಳಿದ್ದಾರೆ. ಕೊರೋನ ಮುಂದಿನ ಕನಿಷ್ಠ ಒಂದು ವರ್ಷಗಳ ಕಾಲ ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆಯಾಗಿ ಮುಂದುವರಿಯಲಿದೆ ಎಂದು 30 ಮಂದಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News