ಬೆಳ್ತಂಗಡಿ: ಸೀಲ್ ಡೌನ್ ಮಾಡಲಾಗಿರುವ ಲಾಯಿಲದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ!

Update: 2021-06-19 04:08 GMT

ಬೆಳ್ತಂಗಡಿ, ಜೂ.19:  ಕೋವಿಡ್-19 ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿರುವ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಕ್ಷ ಸಾಂಗತ್ಯ ಸಪ್ತಾಹ ತಾಳಮದ್ದಳೆ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಲಾಗಿರುವ ಘಟನೆ ನಡೆದಿದ್ದು ಇದರ ವಿರುದ್ದ ಸಾರ್ವಜನಿಕರಿಂದ  ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನೀಡಿರುವ ಅನುಮತಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಲಾಯಿಲ ಗ್ರಾಮದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿರುವ ಕಾರಣ ದ.ಕ ಜಿಲ್ಲಾಡಳಿತದ ಸೂಚನೆಯಂತೆ ಸೀಲ್ಡೌನ್ ಮಾಡಲಾಗಿದೆ.  ಈ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಜನರು ಮನೆಯಿಂದ ಹೊರಗೆ ಬರದಂತೆ ತಡೆಯಲಾಗಿದೆ. ಇದರಿಂದಾಗಿ ಕೂಲಿಕಾರರು ಸೇರಿದಂತೆ ದಿನನಿತ್ಯ ಜೀವನಕ್ಕಾಗಿ ದುಡಿಯುವವರು ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇದೆಲ್ಲದರ ನಡುವೆ ಲಾಯಿಲ ಪೇಟೆಯ ಸಭಾ ಭವನವೊಂದರಲ್ಲಿ ಪ್ರತಿದಿನ ಯಕ್ಷಗಾನ ತಾಳಮದ್ದಳೆ ನಡೆಯುತ್ತಿದೆ.  ಜೂನ್ 12ರಿಂದ ಜೂ.20ರವರೆಗೆ ಯಕ್ಷಗಾನ ತಾಳಮದ್ದಳೆ ನಡೆಸಲು ಹಾಗೂ ಎರಡು ದಿನಗಳ ಯಕ್ಷ ನೃತ್ಯ ಕಾರ್ಯಕ್ರಮವನ್ನು ಛಾಯಾಗ್ರಹಣ ಮಾಡಲು ಅನುಮತಿ ನೀಡಿದೆ. ಹೊರಗಿನಿಂದ ಯಾರೂ ಬರಲು ಅವಕಾಶವಿಲ್ಲ ಎಂದು ಕಟ್ಟುನಿಟ್ಟಿನ ಆದೇಶವಿರುವಾಗ ಹೊರಗಿನವರು ಬಂದು ಈ ರೀತಿ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಯಕ್ಷಗಾನ ಸಪ್ತಾಹ ಕಾರ್ಯಕ್ರಮದ ಚಿತ್ರೀಕರಣ ಮಾತ್ರ ಮಾಡಲಾಗುತ್ತಿದ್ದು ಅದು ಆನಲೈನ್ ಮೂಲಕ ಪ್ರಸಾರವಾಗುತ್ತಿದೆ. ಸೀಲ್ಡೌನ್ ಗಿಂತ ಮೊದಲು ಇದಕ್ಕೆ ಅವಕಾಶ ನೀಡಲಾಗಿದೆ ಇಲ್ಲಿ ವೀಕ್ಷಕರಿಗೆ ಅವಕಾಶವಿಲ್ಲ ಎಂದು ಪಂಚಾಯತು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News