ಕೇಂದ್ರ ಸಂಪುಟ ವಿಸ್ತರಣೆಯ ವದಂತಿಯ ಮಧ್ಯೆ ದಿಲ್ಲಿಗೆ ದೌಡಾಯಿಸಿದ ಸರ್ಬಾನಂದ ಸೋನೊವಾಲ್

Update: 2021-06-19 10:37 GMT

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟವನ್ನು ವಿಸ್ತರಿಸಲು ಸಜ್ಜಾಗಿದ್ದಾರೆ ಎಂಬ ಊಹಾ ಪೋಹಗಳ ಮಧ್ಯೆ, ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ದಿಲ್ಲಿಯಲ್ಲಿ  ಮಂತ್ರಿ ಸ್ಥಾನವನ್ನು ಪಡೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ ಎಂದು NDTV ವರದಿ ಮಾಡಿದೆ.

ಸೋನೊವಾಲ್ ಶುಕ್ರವಾರ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ತಮ್ಮ ಭೇಟಿಯ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್‌ನ ಉನ್ನತ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸೋನೊವಾಲ್ ಅವರು ನರೇಂದ್ರ ಮೋದಿ ಸರಕಾರದ ಮೊದಲ ಅವಧಿಯಲ್ಲಿ 2014 ರಿಂದ 2016 ರವರೆಗೆ ರಾಜ್ಯ ಕ್ರೀಡಾ ಹಾಗೂ  ಯುವ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2016 ರಲ್ಲಿ ಬಿಜೆಪಿ ವಿಧಾನಸಭಾ ಚುನಾವಣಾ ಜಯ ಸಾಧಿಸಿದ ನಂತರ ಅವರು ಅಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇತ್ತೀಚೆಗೆ  ನಡೆದ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಪಕ್ಷ  ಅಸ್ಸಾಂನಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ಆದರೆ ಸೋನಾವಾಲ್  ಬದಲಿಗೆ ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ದಿಲ್ಲಿ ಭೇಟಿಗೆ ಮುಂಚಿತವಾಗಿ, ಸೋನೊವಾಲ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ರಾಜ್ ಭವನದಲ್ಲಿ ಅಸ್ಸಾಂ ಗವರ್ನರ್ ಜಗದೀಶ್ ಮುಖಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಭೇಟಿಯಾದರು. ಸಭೆ ಔಪಚಾರಿಕ ಹಾಗೂ  ರಾಜಕೀಯವನ್ನು ಚರ್ಚಿಸಲಾಗಿಲ್ಲ" ಎಂದು ಮಾಜಿ ಮುಖ್ಯಮಂತ್ರಿಯ ಆಪ್ತ ಸಹಾಯಕ ಹೇಳಿದರು. ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಸ್ವಾಗತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅಸ್ಸಾಂನ ಸ್ಥಳೀಯ ಸೋನೊವಾಲ್-ಕಚಾರಿ ಬುಡಕಟ್ಟು ಜನಾಂಗಕ್ಕೆ ಸೇರಿರುವ  ಸರ್ಬಾನಂದ ಸೋನೊವಾಲ್ ಅವರನ್ನು ಪಕ್ಷದ ನಾಯಕತ್ವವು ಕೇಂದ್ರ ಸಂಪುಟ ಪುನರ್ ರಚನೆಯ ಮೊದಲು  ಸಮಾಲೋಚನೆಗಾಗಿ ದಿಲ್ಲಿಗೆ ಕರೆಸಿಕೊಂಡಿದೆ ಎಂಬ ಊಹಾಪೋಹಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News