ರಾಮಮಂದಿರ ಟ್ರಸ್ಟ್‌ ನಲ್ಲಿ ಅವ್ಯವಹಾರ ನಡೆಯುತ್ತಿದೆ, ಸಿಬಿಐ ತನಿಖೆ ನಡೆಸಿ ಎಂದು ಆಗ್ರಹಿಸುತ್ತಿರುವ ಅಯೋಧ್ಯೆಯ ಮಹಂತರು

Update: 2021-06-19 07:35 GMT

ಲಕ್ನೋ: ರಾಮ ಜನ್ಮಭೂಮಿ ಟ್ರಸ್ಟ್ ವಿರುದ್ಧ ಕೇಳಿ ಬಂದಿರುವ  ಅವ್ಯವಹಾರ ಆರೋಪಗಳ ಕುರಿತಂತೆ ಸಿಬಿಐ ತನಿಖೆ ನಡೆಯಬೇಕೆಂದು ಅಯ್ಯೋಧ್ಯೆಯಲ್ಲಿನ ಹಲವಾರು ಸಂತರು ಆಗ್ರಹಿಸಿದ್ದಾರೆ. ಈ ಬೇಡಿಕೆ ಮುಂದಿಟ್ಟವರಲ್ಲಿ ನಿರ್ವಾಣಿ ಅಖಾರ ಮುಖ್ಯಸ್ಥ ಮಹಂತ್ ಧರಮ್ ದಾಸ್,  ದಿಗಂಬರ್ ಅಖಾರ ಮುಖ್ಯಸ್ಥ ಮಹಂತ್ ಸುರೇಶ್ ದಾಸ್ ಹಾಗೂ ನಿರ್ಮೋಹಿ ಅಖಾರದ ಮಹಂತ್ ಸೀತಾರಾಮ್ ದಾಸ್ ಸೇರಿದ್ದಾರೆ ಎಂದು theprint.in ವರದಿ ಮಾಡಿದೆ.

ರಾಮ ಮಂದಿರ ನಿರ್ಮಾಣಕ್ಕಾಗಿ ಹರಿದು ಬಂದ ದೇಣಿಗೆಗಳನ್ನು ಟ್ರಸ್ಟ್ ದುರ್ಬಳಕೆ ಮಾಡುತ್ತಿದೆ ಎಂದು ಮಹಂತ್ ಧರಮ್ ದಾಸ್ ಆರೋಪಿಸಿದ್ದಾರೆ. "ಈ ಟ್ರಸ್ಟ್ ಭ್ರಷ್ಟವಾಗಿದೆ. ಈ ಟ್ರಸ್ಟ್ ರಚಿಸಿದವರಿಗೆ ಅವರದ್ದೇ ಆದ ಸ್ಥಾಪಿತ ಹಿತಾಸಕ್ತಿಗಳಿರುವುದರಿಂದ ಈ ದೊಡ್ಡ ಹಗರಣ ನಡೆಯುತ್ತಿದೆ" ಎಂದು ಅವರು ಹೇಳಿದ್ದಾರೆ.

"ಜನರು ರಾಮ ಮಂದಿರ ನಿರ್ಮಾಣಕ್ಕಾಗಿ, ಸಂತರ ಸೇವೆಗಾಗಿ ಹಾಗೂ ಗೋ ಮಾತೆಗಾಗಿ ದೇಣಿಗೆ ನೀಡಿದ್ದಾರೆ. ಈ ಹಣ ಜಮೀನು ಖರೀದಿಸಲು ಹೋಟೆಲ್ ನಿರ್ಮಿಸಲು ಮತ್ತು ಉದ್ಯಮ ನಡೆಸಲು ನೀಡಲಾಗಿಲ್ಲ. ಇಂತಹ ಕೆಲಸ ಮಾಡುತ್ತಿರುವವರು ಶ್ರೀ ರಾಮನ ಮೇಲೆ ನಂಬಿಕೆಯರಿಸಿಲ್ಲ" ಎಂದು ಅವರು ಹೇಳಿದರು.

ಅಯೋಧ್ಯೆಯಲ್ಲಿ ಒಂದು ತುಂಡು ಭೂಮಿಯನ್ನು ಕುಸುಮ್ ಪಾಠಕ್-ಹರೀಶ್ ಪಾಠಕ್ ದಂಪತಿಗಳಿಂದ ರೂ 2 ಕೋಟಿಗೆ ಸುಲ್ತಾನ್ ಅನ್ಸಾರಿ ಮತ್ತು ರವಿ ಮೋಹನ್ ತಿವಾರಿ ಖರೀದಿಸಿದ್ದರು ಎಂದು ಆಪ್ ನ ಉತ್ತರ ಪ್ರದೇಶ ಉಸ್ತುವಾರಿ ಸಂಜಯ್ ಸಿಂಗ್ ಜೂನ್ 14ರಂದು ಆರೋಪಿಸಿದ ನಂತರ ವಿವಾದ ಹುಟ್ಟಿಕೊಂಡಿತ್ತು. ಈ ಜಮೀನು ಖರೀದಿ ಒಪ್ಪಂದಕ್ಕೆ ರಾಮ ಜನ್ಮಭೂಮಿ ಟ್ರಸ್ಟ್ ನ ಸದಸ್ಯ ಅನಿಲ್ ಮಿಶ್ರಾ ಮತ್ತು  ಅಯೋಧ್ಯೆಯ ಮೇಯರ್ ರಿಷಿಕೇಶ್ ಉಪಾಧ್ಯಾಯ ಅವರು ಸಾಕ್ಷಿಗಳಾಗಿದ್ದರು ಹಾಗೂ ಇದೇ ಜಮೀನನ್ನು ರಾಮ ಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ, ವಿಹಿಂಪ ನಾಯಕ ಚಂಪತ್ ರಾಯ್ ಮುಂದಿನ ಐದು ನಿಮಿಷಗಳಲ್ಲಿ ರೂ 18.5 ಕೋಟಿಗೆ ಖರೀದಿಸಿದ್ದರು ಎಂದು ಸಿಂಗ್ ಆರೋಪಿಸಿದ್ದರು.

ಆದರೆ ಟ್ರಸ್ಟ್ ಈ ಜಮೀನು ಖರೀದಿ ಒಪ್ಪಂದವನ್ನು ಸಮರ್ಥಿಸಿದೆಯಲ್ಲದೆ  ಜಮೀನಿಗೆ ಅಂತಿಮವಾಗಿ ನೀಡಿದ ಮೊತ್ತವು ಮಾರುಕಟ್ಟೆ ಮೌಲ್ಯಕ್ಕಿಂತ ಬಹಳ ಕಡಿಮೆ ಎಂದು ವಾದಿಸಿತ್ತು.

ಆದರೆ ಅದೇ ದಂಪತಿ-ಹರೀಶ್-ಕುಸುಮ್ ಪಾಠಕ್  1.037 ಹೆಕ್ಟೇರ್ ಜಮೀನನ್ನು ಟ್ರಸ್ಟ್‍ಗೆ ರೂ 8 ಕೋಟಿಗೆ ಮಾರಾಟ ಮಾಡಿದ್ದಾರೆಂದು ಗುರುವಾರ  ಬಹಿರಂಗಗೊಂಡ ಹೊಸ ದಾಖಲೆಗಳಿಂದ ತಿಳಿದು ಬಂದಿದೆ.

ಈ ವಿವಾದ ಹುಟ್ಟಿಕೊಂಡ ನಂತರ ಪಾಠಕ್ ದಂಪತಿ ಎಲ್ಲಿದ್ದಾರೆಂದು ತಿಳಿದು ಬಾರದೇ ಇರುವುದು ಕೂಡ ಸೋಜಿಗದ ಸಂಗತಿಯಾಗಿದೆ.

ಈ ಕುರಿತು ರಾಮ ಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಪ್ರತಿಕ್ರಿಯಿಸಿಲ್ಲ, ಆದರೆ ಟ್ರಸ್ಟ್ ಈ ಆರೋಪಗಳನ್ನು ಅಲ್ಲಗಳೆಯಲು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯಿದೆಯೆನ್ನಲಾಗಿದೆ.

ಈ ನಡುವೆ ಈ ವಿವಾದದ ಕುರಿತು ತನಿಖೆಗೆ ಒತ್ತಡ ಹೆಚ್ಚುತ್ತಿದೆ. ನಿರ್ಮೋಹಿ ಅಖಾರ ವಕ್ತಾರ ಮಹಂತ್ ಸೀತಾರಾಮ್ ದಾಸ್ ಪ್ರತಿಕ್ರಿಯಿಸಿ "ಈ ಜನರ(ಟ್ರಸ್ಟ್ ಸದಸ್ಯರು) ಕುರಿತು ನನಗೆ ಮೊದಲೇ ಸಂಶಯವಿತ್ತು. ಚಂಪತ್ ರಾಯ್ ಬಗ್ಗೆ ಕೂಡ ಸಂಶಯವಿದೆ, ಅವರನ್ನೇಕೆ ಪ್ರಧಾನ ಕಾರ್ಯದರ್ಶಿಯನ್ನಾಗಿಸಲಾಗಿದೆ ಎಂದು ತಿಳಿದಿಲ್ಲ. ರಾಮ ಮಂದಿರ ನಿರ್ಮಾಣದ ಉದ್ದೇಶವನ್ನು ವಿಹಿಂಪ ಹಾಗೂ ನಿರ್ಮೋಹಿ ಅಖಾರ ಹೊಂದಿದ್ದವು, ಈ ಟ್ರಸ್ಟ್ ಸದಸ್ಯರು ಏನು ಮಾಡಿದ್ದಾರೆ, ಈಗ ಅವರು ತಮ್ಮನ್ನು ಹಾಗೂ ಜಮೀನು ವ್ಯವಹಾರದಲ್ಲಿರುವವರನ್ನು ಸಮರ್ಥಿಸಿ ಸತ್ಯ  ಹೊರಬರದಂತೆ ನೋಡುತ್ತಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು,'' ಎಂದು ಅವರು ಹೇಳಿದರು.

ವಿಪಕ್ಷಗಳು ಜಮೀನು ಒಪ್ಪಂದಗಳ ಕುರಿತು ಪ್ರಶ್ನೆಗಳನ್ನು ಎತ್ತುತ್ತಿವೆಯೆಂದಾದರೆ ಅದರ ಕುರಿತು ತನಿಖೆ ನಡೆಯಬೇಕು ಎಂದು ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಪ್ರತಿನಿಧಿ ಮಹಂತ್ ಕಮಲ್ ನಯನ್ ದಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News