20 ಲಕ್ಷ ರೂ.ಗೆ ಜಮೀನು ಖರೀದಿಸಿ ರಾಮ ಜನ್ಮಭೂಮಿ ಟ್ರಸ್ಟ್ ಗೆ 2.5 ಕೋಟಿಗೆ ಮಾರಿದ ಅಯೋಧ್ಯೆ ಬಿಜೆಪಿ ಮೇಯರ್ ಸೋದರಳಿಯ

Update: 2021-06-19 12:07 GMT
Photo: Facebook

ಅಯೋಧ್ಯೆ : ಅಯೋಧ್ಯೆಯ ಮೇಯರ್ ರಿಷಿಕೇಷ್ ಉಪಾಧ್ಯಾಯ ಅವರ ಸೋದರಳಿಯ ದೀಪ್ ನಾರಾಯಣ್ ಎಂಬವರು ಅಯೋಧ್ಯೆಯಲ್ಲಿ ಗಟಾ ಸಂಖ್ಯೆ 135ರಲ್ಲಿರುವ 890 ಚದರ ಮೀಟರ್  ಜಮೀನನ್ನು ದೇವೇಂದ್ರ ಪ್ರಸಾದಾಚಾರ್ಯ ಮಹಂತ್ ಎಂಬವರಿಂದ ಫೆಬ್ರವರಿ 20ಕ್ಕೆ 20 ಲಕ್ಷಕ್ಕೆ ಖರೀದಿಸಿದ್ದರೆ ಅದೇ ಜಮೀನನ್ನು ಮೂರು ತಿಂಗಳ ನಂತರ  ಮೇ 11ರಂದು ರಾಮ ಜನ್ಮಭೂಮಿ ಟ್ರಸ್ಟ್ ಗೆ ರೂ 2.5 ಕೋಟಿಗೆ ಮಾರಾಟ ಮಾಡಿದ್ದಾರೆಂದು ತಾನು ಪಡೆದುಕೊಂಡ ದಾಖಲೆಗಳು ತೋರಿಸುತ್ತಿವೆ ಎಂದು newslaundry.com  ವರದಿ ಮಾಡಿದೆ. ಈ ನಿರ್ದಿಷ್ಟ ಜಮೀನಿನ ಮೌಲ್ಯವನ್ನು ಸ್ಥಳೀಯಾಡಳಿತ ರೂ 35.6 ಲಕ್ಷ ಎಂದು ನಿಗದಿ ಪಡಿಸಿದೆಯೆನ್ನಲಾಗಿದೆ.

ಈ ಜಮೀನು ಅಯೋಧ್ಯೆಯ ಸದರ್ ತೆಹ್ಸಿಲ್ ವ್ಯಾಪ್ತಿಯಲ್ಲಿರುವ ಹವೇಲಿ ಅವಧ್ ಎಂಬಲ್ಲಿನ ಕೋಟ್ ರಾಮಚಂದ್ರ ಎಂಬಲ್ಲಿದೆ. ನ್ಯೂಸ್ ಲಾಂಡ್ರಿಗೆ ಲಭಿಸಿದ ದಾಖಲೆಗಳ ಪ್ರಕಾರ ಈ ಜಮೀನು  ರಾಮ ಜನ್ಮಭೂಮಿಗೆ ಬಹಳ ಹತ್ತಿರದಲ್ಲಿದೆ.

ಜಮೀನು ವ್ಯವಹಾರಗಳ ಕುರಿತಾದ ಮಾಹಿತಿಯನ್ನು ಉತ್ತರ ಪ್ರದೇಶದ ಇಂಟಗ್ರೇಟೆಡ್ ಗ್ರೀವೆನ್ಸ್ ರಿಡ್ರೆಸಲ್ ಸಿಸ್ಟಂನಿಂದಲೂ ಕಲೆ ಹಾಕಲಾಗಿದೆ. ಈ ಜಮೀನನ್ನು ತಲಾ ಚದರ ಮೀಟರ್ ಗೆ ರೂ 2,247ರಂತೆ ಖರೀದಿಸಿದ್ದ ನಾರಾಯಣ್ ಅದನ್ನು ತಲಾ ಚದರ ಮೀಟರ್‍ಗೆ ರೂ 28,090ರಂತೆ ಟ್ರಸ್ಟ್ ಗೆ ಮಾರಾಟ ಮಾಡಿದ್ದಾರೆ. ಕೋಟ್ ರಾಮಚಂದ್ರ ಪ್ರದೇಶದ ಅಧಿಕೃತ ದರ ಚದರ ಮೀಟರ್‍ಗೆ ರೂ 4,000 ಆಗಿದೆ.

ನಾರಾಯಣ್ ಫೇಸ್ ಬುಕ್ ಪುಟದಲ್ಲಿ ತನ್ನನ್ನು ಸಕ್ರಿಯ ಬಿಜೆಪಿ ಸದಸ್ಯ ಎಂದು ವರ್ಣಿಸಿದ್ದಾರೆ. ಈ ಜಮೀನು ವ್ಯವಹಾರದಲ್ಲಿ ಸಾಕ್ಷಿಯೆಂದು ರಾಮ್ ಜನ್ಮಭೂಮಿ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಅವರ ಹೆಸರು ಇದೆ. ದಾಖಲೆಗಳ ಪ್ರಕಾರ ಟ್ರಸ್ಟ್ ಮೇ 11ರಂದು ನಾರಾಯಣ್ ಗೆ ರೂ 2.5 ಕೋಟಿ ಹಣವನ್ನು ಆರ್‍ಟಿಜಿಎಸ್ ಮೂಲಕ ಪಾವತಿಸಿದೆ.

ನಾರಾಯಣ್ ಈ 890 ಚದರ ಮೀಟರ್ ಜಮೀನನ್ನು ಪ್ರಸಾದಾಚಾರ್ಯರಿಂದ ಖರೀದಿಸಿದ್ದ ದಿನದಂದೇ ಕೋಟ್ ರಾಮಚಂದ್ರದಲ್ಲಿರುವ 36 ಎಂ ಗಟಾ ಸಂಖ್ಯೆಯ ಜಮೀನನ್ನು ಟ್ರಸ್ಟ್ ಗೆ ರೂ 1 ಕೋಟಿಗೆ ಮಾರಾಟ ಮಾಡಿದ್ದರು. ಈ 676.86 ಚದರ ಮೀಟರ್ ಜಮೀನನ್ನು ತಲಾ ಚದರ ಮೀಟರ್‍ಗೆ ರೂ 14,744ರಂತೆ ಮಾರಾಟ ಮಾಡಲಾಗಿದ್ದು ಅಧಿಕೃತ ಮೌಲ್ಯ ರೂ 4,000 ಆಗಿದೆ. ಈ ಜಮೀನು ದೇವಳ ಸಂಕೀರ್ಣದಿಂದ 500 ಮೀಟರ್ ದೂರದಲ್ಲಿದ್ದು ಅದರ ಅಧಿಕೃತ ಮೌಲ್ಯ ರೂ 27.08 ಲಕ್ಷ ಆಗಿದೆ ಎಂದು ವರದಿ ತಿಳಿಸಿದೆ.

ಕೃಪೆ: newslaundry.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News